

ಹುಕ್ಕೇರಿ: ರೈತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವಲ್ಲಿ ಪಿಕೆಪಿಎಸ್‌ಗಳು ಮುಂಚೂಣಿಯಲ್ಲಿವೆ. ಇದರಿಂದ ದೇಶದ ಅರ್ಥ ವ್ಯವಸ್ಥೆ ಬಲಗೊಳ್ಳಲು ಸಾಧ್ಯ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ಗುಡಸ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಕೆಪಿಎಸ್‌ಗಳು ಮಾತ್ರ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಏಕೈಕ ಸಂಸ್ಥೆಗಳಾಗಿವೆ. ಗುಡಸ ಗ್ರಾಮದ ಪಿಕೆಪಿಎಸ್‌ನಿಂದ 2,261 ಜನರಿಗೆ 21.18 ಕೋಟಿ ರೂ. ಪತ್ತು ಮಂಜೂರಾಗಿದೆ. ಈ ಪಿಕೆಪಿಎಸ್ ತಾಲೂಕಿನ ಶಿರಢಾಣ, ಝಾಂಗಟಿಹಾಳ, ಗುಡಸ, ಕೊಟಬಾಗಿ ಗ್ರಾಮಗಳ ಕಾರ್ಯಕ್ಷೇತ್ರ ಹೊಂದಿದೆ. ಹಣಕಾಸಿನ ನೆರವಿನ ಜತೆಗೆ ರೈತರಿಗೆ ಗೊಬ್ಬರ ಮತ್ತು ಟ್ರ್ಯಾಕ್ಟರ್ ಖರೀದಿಸಲು ಸಾಲ ನೀಡಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 1.52 ಕೋಟಿ ರೂ. ಲಾಭ ಗಳಿಸಿದೆ. ಶೇ.25ರಂತೆ ಡಿವಿಡೆಂಡ್ ಹಂಚಲು ಚಿಂತನೆ ಮಾಡಿದ್ದು, ಶೂನ್ಯ ಬಡ್ಡಿ ದರದಲ್ಲಿ 18.10 ಕೋಟಿ ರೂ. ಸಾಲ ವಿತರಿಸಿದೆ. 16 ಸದಸ್ಯರಿಗೆ ಟ್ರ್ಯಾಕ್ಟರ್ ಸಾಲ ಸೇರಿ ಒಟ್ಟು 44.94 ಕೋಟಿ ರೂ. ಸಾಲ ವಿತರಿಸಲಾಗಿದೆ. 65.65 ಕೋಟಿ ರೂ. ದುಡಿಯುವ ಬಂಡವಾಳ ಮತ್ತು 38.97 ಕೋಟಿ ರೂ. ಠೇವು ಹೊಂದಿದೆ ಎಂದು ತಿಳಿಸಿದರು.
ಅವಜೀಕರ ಆಶ್ರಮದ ಅಭಿನವ ಮಂಜುನಾಥ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಂಘದಿಂದ ವಿಮಾ ಚೆಕ್ ವಿತರಿಸಲಾಯಿತು.
ಉಪಾಧ್ಯಕ್ಷ ರಾಯಪ್ಪ ಡೂಗ, ನಿರ್ದೇಶಕರಾದ ಸದಾನಂದ ಹಿರೇಮಠ, ಶಿದಗೌಡ ಪಾಟೀಲ, ಬಾಬು ಜಾರಕಿಹೊಳಿ, ಅಲಗೌಡ ದೊಡದನ್ನವರ, ಅಡಿವೆಪ್ಪ ಮಗದುಮ್ಮ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ, ಬ್ಯಾಂಕ್ ನಿರೀಕ್ಷಕ
ಕೆ.ಎಸ್.ಗವಿಮಠ ಇತರರಿದ್ದರು. ಮುಖ್ಯ ಕಾರ್ಯನಿರ್ವಾಹಕ ಎಸ್.ಎಸ್. ಮಲ್ಲಾಪೂರೆ ಸ್ವಾಗತಿಸಿದರು. ಶಿವಾನಂದ ಕುಂಬಾರ ನಿರೂಪಿಸಿದರು. ಸುನೀಲ ಮುದಿಗೌಡ ವಂದಿಸಿದರು.