ಕರ್ನಾಟಕ ಫಿಲಂ ಅಸೋಸಿಯೇಷನ್ ಅಸ್ತಿತ್ವಕ್ಕೆ

For existence of Karnataka Film Association
Published on

ಮಡಿಕೇರಿ:

ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಹಿರಿಯ ಕಲಾವಿದರು ಮತ್ತು ಹೊಸ ಕಲಾವಿದರ ಜತೆಗೂಡಿ ಕರ್ನಾಟಕ ಫಿಲಂ ಅಸೋಸಿಯೇಷನ್ ಸ್ಥಾಪಿಸಲಾಗಿದ್ದು, ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಅಸೋಸಿಯೇಷನ್ ಸಲಹೆಗಾರ ಡಾ. ಎನ್.ಎನ್. ಪ್ರಹ್ಲಾದ್ ತಿಳಿಸಿದ್ದಾರೆ.

ಇದೊಂದು ನೂತನ ಫಿಲಂ ಚೇಂಬರ್ ಆಗಿದ್ದು ಮೂವಿ ಬ್ಯಾನರ್, ಮೂವಿ ಟೈಟಲ್, ಸಿನಿಮಾಕ್ಕೆ ಸಂಬಂಧಿಸಿದ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮೆನ್, ಡ್ಯಾನ್ಸ್, ಸಂಗೀತ, ಫೈಟ್ ಮಾಸ್ಟರ್ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲಾ ನೋಂದಣಿಗೆ ಅವಕಾಶ ಇದೆ. ಇದು ಅಜೀವ ನೋಂದಣಿ ಆಗಿರುತ್ತದೆ. ನೋಂದಣಿ ನಂತರ ಗುರುತಿನ ಚೀಟಿ ಕೊಡಲಾಗುವುದು.

ನೋಂದಣಿ ಮಾಡಿಕೊಂಡ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧೆಯ ಅವಕಾಶ ಇದೆ. ಈ ಬಗ್ಗೆ ಎಲ್ಲಾ ಜಿಲ್ಲೆಗಳಲ್ಲೂ ಮಾಹಿತಿ ಕೋಡಲಾಗುತ್ತಿದೆ. ಅಸೋಸಿಯೇಷನ್ ವತಿಯಿಂದ ಅಗತ್ಯ ಇರುವ ಸದಸ್ಯರಿಗೆ ೫೦ ಸಾವಿರ ರೂ. ತನಕ ಆರೋಗ್ಯ ಸೌಲಭ್ಯ, ಸಂಕಷ್ಟದಲ್ಲಿ ಇರುವವರಿಗೆ ಆಹಾರ ಕಿಟ್ ವಿತರಣೆ ಮಾಡುವ ಚಿಂತನೆ ಇದೆ. ಮೇಕಪ್‌ಮ್ಯಾನ್, ಸ್ಕ್ರಿಪ್ಟ್ ಬರವಣಿಗೆ, ಸಂಕಲನ, ಛಾಯಾಗ್ರಹಣ, ನಿರ್ದೇಶನ, ನಟನೆ, ಚಿತ್ರೀಕರಣ ಸ್ಥಳ ಆಯ್ಕೆ, ಶಿರ್ಷಿಕೆ ಆಯ್ಕೆ, ಬಜೆಟ್ ನಿರ್ಧಾರ, ಆಡಿಷನ್, ಚಿತ್ರಗೀತೆ ರಚನೆ ಹೀಗೆ ವಿವಿಧ ವಿಷಯಗಳಲ್ಲಿ ತರಬೇತಿಯ ಯೋಚನೆಯೂ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕರ್ನಾಟಕ ಫಿಲಂ ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್. ರವೀಂದ್ರ ಮಾತನಾಡಿ ೨೦೨೩ರ ಡಿಸೆಂಬರ್‌ನಲ್ಲಿ ಆರಂಭವಾದ ತಮ್ಮ ಅಸೋಸಿಯೇಷನ್‌ನಲ್ಲಿ ಈಗಾಗಲೇ ೩೩೫ ಸದಸ್ಯರಿದ್ದಾರೆ. ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಒಂದೇ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಅಸೋಸಿಯೇಷನ್ ಆರಂಭಿಸಲಾಗಿದೆ ಎಂದರು.
ಸದಸ್ಯೆ ಹೇಮಲತಾ, ಮುನ್ನೂರು ಕೋಟಿ ರಾಧಾ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net