

ಅಥಣಿ ಗ್ರಾಮೀಣ: ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು, ಪರಿಸರ ಸಮತೋಲನವಾಗಿಸಲು ಪ್ರತಿಯೊಬ್ಬರೂ ಜೈನ ಧರ್ಮದ ಸಿದ್ಧಾಂತ, ತತ್ತ್ವಗಳನ್ನು ಪಾಲಿಸಬೇಕು ಎಂದು ಪಪೂ ಬಾಲಾಚಾರ್ಯ ಧರ್ಮಪ್ರಭಾವಕ ಶ್ರೀ 108 ಸಿದ್ಧಸೇನ ಮುನಿಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಜರುಗುತ್ತಿರುವ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಅಹಿಂಸೆಯನ್ನೇ ಪರಮ ತತ್ತ್ವವನ್ನಾಗಿಸಿಕೊಂಡ ಜೈನ ಸಮುದಾಯವು ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಎಲ್ಲ ಸಮುದಾಯದೊಂದಿಗೆ ಒಗ್ಗೂಡಿ ಸಮಾಜಕ್ಕೆ ನೆರವು ನೀಡುವ ಸದ್ಗುಣ ಹೊಂದಿದೆ ಎಂದರು. ಸಾಧನಾರತ್ನ ಆಚಾರ್ಯ ಶ್ರೀ 108 ಅಮಿತಸೇನ ಮುನಿಮಹಾರಾಜರು ಮಾತನಾಡಿ, ಜ್ಞಾನ ಅಮೃತಕ್ಕೆ ಸಮಾನ, ಹಾಗಾಗಿ ಜ್ಞಾನ ಪಡೆಯಲು ಸದಾ ಹಂಬಲಿಸಬೇಕು. ಜ್ಞಾನದಿಂದ ಶ್ರೇಷ್ಠರಾಗಲು ಸಾಧ್ಯ ಎಂದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಬೆಳಗಾವಿ ಮತ್ತು ಚಿಕ್ಕೋಡಿ ಸಂಸದರ ಜತೆಗೂಡಿ ಜೈನ ಧರ್ಮಕ್ಕೆ ಕೇಂದ್ರ ಸರ್ಕಾರದ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಇದಕ್ಕೂ ಪೂರ್ವ ಮಂಗಲವಾದ್ಯಘೋಷ ಸುಪ್ರಭಾತ ಸ್ತೋತ್ರ, ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ತೀರ್ಥಂಕರರ ಮಹಾಮುನಿಗಳ ಆಹಾರದಾನ ವಿಧಿ, ಕೇವಲಜ್ಞಾನ ಕಲ್ಯಾಣ ಮಹೋತ್ಸವ, ಸಾಂಸ್ಕೃತಿಕ, ಸಂಗೀತ, ಆರತಿ ಕಾರ್ಯಕ್ರಮ ಹಾಗೂ ಯಜಮಾನರ ಆಗಮನದ ಆನೆಯ ಮೆರವಣಿಗೆ ಜರುಗಿತು. ಜಾನಪದ ಮತ್ತು ವಿವಿಧ ಕಲಾ ತಂಡಗಳ ಕಲರವ ನೋಡುಗರ ಗಮನಸೆಳೆಯಿತು.
ಇಂದಿನ ಕಾರ್ಯಕ್ರಮ: ಬೆಳಗ್ಗೆ ಮಂಗಲವಾದ್ಯಘೋಷ, ಸುಪ್ರಭಾತ ಸ್ತೋತ್ರ, ಆನೆಯಮೇಲೆ ಕುಳಿತು ಯಜಮಾನರ ಆಗಮನ, ನಿತ್ಯವಿಧಿ, ಆನೆಯಮೇಲಿಂದ ಮಂಗಲಕುಂಭ ತರುವುದು, ಪಂಚಾಮೃತ ಅಭಿಷೇಕ, ಮಹಾಶಾಂತಿಮಂತ್ರ, ನಿರ್ವಾಣ ಕಲ್ಯಾಣ ಮಹೋತ್ಸವ, ನಿರ್ವಾಣ ಕಲ್ಯಾಣ ವಿಧಾನ, ಸ್ವರ್ಗದಿಂದ ಅಗ್ನಿಕುಮಾರ ಬಂದು ನಿರ್ವಾಣಕಲ್ಯಾಣ ಆಚರಣೆ, ಮಧ್ಯಾಹ್ನ, ಯಜಮಾನರಿಂದ ಪೂಜ್ಯರಿಗೆ ಪ್ರವಚನಕ್ಕೆ ನಿವೇದನೆ ಮಾಡುವುದು, ಮಂಗಲ ಪ್ರವಚನ, 1008 ಕಲಶಾಭಿಷೇಕ, ಅಮೃತಸ್ನಾನ, ಆಚಾರ್ಯ ಗುರುಗಳ ಸಂಘ ಪೂಜೆ, ಸತ್ಕಾರ ಸಮಾರಂಭ, ವಸಂತ ತಿಲಕೋತ್ಸವ ಧ್ವಜಾರೋಹಣ, ಕಂಕಣ ವಿಮೋಚನೆ, ಸಂಗೀತ ಆರತಿ, ವಿಸರ್ಜನೆ ಕಾರ್ಯಕ್ರಮ ಜರುಗಲಿವೆ.
ಪಪೂ ಶ್ರೀ 108 ವಾತ್ಸಲ್ಯಮೂರ್ತಿ ಸಮುದ್ರಸೇನ ಮುನಿಮಹಾರಾಜರು, ಪಪೂ ಆಚಾರ್ಯ ಶ್ರೀ 108 ಅಮೀತಸೇನ ಮುನಿಮಹಾರಾಜರು, ಪಪೂ ಶ್ರೀ 108 ಮಲ್ಲಿಸೇನ ಮುನಿಮಹಾರಾಜರು, ಪಪೂ 105 ಅನಂತಸೇನ ಮಹಾರಾಜರು, ಪಪೂ ಶ್ರೀ 105 ಅಕ್ಷಯಸೇನ ಮಹಾರಾಜರು, ಭರತೇಶ ಉಪಾಧ್ಯೆ, ಬಾಹುಬಲಿ ಉಪಾಧ್ಯೆ, ಪ್ರದೀಪ ಉಪಾಧ್ಯೆ, ವಿಪ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಧರೆಪ್ಪ ಠಕ್ಕಣ್ಣವರ, ವಕೀಲ ಕಲ್ಲಪ್ಪ ವನಜೋಳ, ಅರುಣ ಶಾ. ಇತರರಿದ್ದರು.