

ಬೆಳಗಾವಿ: ರಾಜ್ಯದಲ್ಲಿ ಹಿಂಗಾರು ಮಳೆ ನಿರೀಕ್ಷೆ ಮೀರಿ ಅಧಿಕವಾಗಿರುವ ಕಾರಣಕ್ಕೆ ಬಹುತೇಕ ಕಡೆಗಳಲ್ಲಿ ಬೆಳೆ ಹಾನಿ ಉಂಟಾಗಿದೆ. ಇದರಿಂದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಇದರಿಂದ ದೀಪಾವಳಿ ಹಬ್ಬದ ಖರೀದಿಯಲ್ಲಿ ಇರುವ ಗ್ರಾಹಕರ ಜೇಬಿಗೆ ತುಸು ಭಾರವಾಗಿದೆ.
ಮೊದಲೇ ದೀಪಾವಳಿ ಹಬ್ಬ ಬಂತು ಎಂದರೆ ವ್ಯಾಪಾರಸ್ಥರಿಗೆ ಶುಕ್ರದೆಸೆ. ಈ ವೇಳೆ 2-3 ಪಟ್ಟು ದರ ಹೆಚ್ಚಿಸಿ ಮಾರಾಟ ಮಾಡುತ್ತಾರೆ. ಇದೇ ವೇಳೆ ಬೆಲೆಗಳು ಏರಿಕೆ ಕಂಡಿದ್ದರಿಂದ ಸಹಜವಾಗಿಯೇ ಎಲ್ಲ ಅಗತ್ಯ ವಸ್ತುಗಳು ದುಪ್ಪಟ್ಟಾಗಲಿದೆ.
ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದ ಹಿನ್ನೆಲೆ ಹಾಗೂ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ನಷ್ಟವಾಗಿವೆ. ಇದೇ ಕಾರಣಕ್ಕೆ ಹತ್ತು ತಿಂಗಳಲ್ಲಿ ಮೊದಲ ಬಾರಿ ತರಕಾರಿ ದರ ಏರಿಕೆಯಾಗಿದೆ. ಇದು ಗ್ರಾಹಕರ ಜೇಬಿಗೆ ಬರೆ ಎಳೆದಿದೆ.
ಇನ್ನು ಹೆಚ್ಚಾಗುವ ಆತಂಕ: ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೊ, ಮೆಣಸಿನಕಾಯಿ ಸೇರಿದಂತೆ ಇತರೆ ತರಕಾರಿಗಳ ದರ ಏರಿಕೆಯಿಂದ ಗ್ರಾಹಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಳ್ಳುಳ್ಳಿ ಕೆಜಿಯೊಂದಕ್ಕೆ 320 ರೂ ಇಂದ 400 ರೂ. ದರ ಏರಿಕೆ ಆಗಿದ್ದು, ಈರುಳ್ಳಿ ದರ 60ರ ಆಸುಪಾಸಿನಲ್ಲಿದೆ. ಹೀಗಾಗಿ, ದೀಪಾವಳಿ ದಿನಗಳಲ್ಲಿ ತರಕಾರಿ ದರ ಇನ್ನೂ ಹೆಚ್ಚಾಗುವ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ.
ಯಾವ ತರಕಾರಿ ದರ ಎಷ್ಟಿತ್ತು?: ದಪ್ಪ ಈರುಳ್ಳಿ 60-80 ರೂ., ಟೊಮ್ಯಾಟೊ 50-70ರೂ., ಹಸಿ ಮೆಣಸಿನಕಾಯಿ 60-70, ಆಲೂಗಡ್ಡೆ 50-60 ರೂ., ಕ್ಯಾಪ್ಸಿಕಮ್ 60-70 ರೂ., ಹಾಗಲಕಾಯಿ 70-80 ರೂ., ಬೀನ್ಸ್ 80- 90 ರೂ., ಬದನೆಕಾಯಿ 50-70 ರೂ., ಬೆಂಡೆಕಾಯಿ 70-80 ರೂ., ಹೀಗೆ ಎಲ್ಲ ತರಕಾರಿಗಳು ಕಳೆದ ಕೆಲವು ದಿನಗಳಿಂದ ಏರಿಕೆಯತ್ತ ಸಾಗಿವೆ.
ಸದ್ಯಕ್ಕಿಳಿಯಲ್ಲ ಈರುಳ್ಳಿ ಬೆಲೆ: ಕಳೆದ ಒಂದು ತಿಂಗಳಿನಿಂದಲೂ ಸ್ಥಿರತೆ ಕಾಯ್ದುಕೊಂಡು ಬಂದಿರುವ ಈರುಳ್ಳಿ ಬೆಲೆ ಸದ್ಯಕ್ಕೆ ಇಳಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆದರೆ, ದಲ್ಲಾಳಿಗಳ ಆಟೋಟೋಪದಿಂದ ದರದಲ್ಲಿ ಆಗಾಗ ವ್ಯತ್ಯಾಸ ಕಂಡು ಬರುತ್ತಿದೆ. ಹೆಚ್ಚು ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಮಳೆ ಅಧಿಕವಾಗಿರುವ ಕಾರಣ ಈರುಳ್ಳಿ ಹೊಲದಲ್ಲಿಯೇ ನಾಶವಾಗಿದೆ. ಇದರಿಂದ ಮಾರುಕಟ್ಟೆಗೆ ಈರುಳ್ಳಿ ಬರದೇ ಇರುವ ಕಾರಣಕ್ಕೆ ಇನ್ನೂ ಕೆಲವು ದಿನಗಳು ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಲಿದೆ. ಇದರೊಟ್ಟಿಗೆ ಟೊಮ್ಯಾಟೊ ಸಹಿತ ಕಡಿಮೆ ಆಗುವುದಿಲ್ಲ ಎಂದು ವ್ಯಾಪಾಸ್ಥರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಣೆಗೆ ಮುಂದಾಗಿದ್ದ ಜನರಿಗೆ ದರ ಏರಿಕೆಯ ಬಿಸಿ ತಟ್ಟಿದೆ. ಆದರೆ, ದೀಪಾವಳಿ ಪ್ರಮುಖ ಹಬ್ಬವಾಗಿರುವ ಕಾರಣಕ್ಕೆ ಜನ ಬೆಲೆ ಏರಿಕೆ ಲೆಕ್ಕಿಸದೇ ಮಾರುಕಟ್ಟೆಗೆ ಲಗ್ಗೆ ಇಟ್ಟು ಖರೀದಿ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಅಡುಗೆ ಎಣ್ಣೆಯ ಆಮದು ಸುಂಕವನ್ನು ಹೆಚ್ಚಳ ಮಾಡಿರುವ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಅಡುಗೆ ಎಣ್ಣೆ ದರ ಏರಿಕೆಯತ್ತ ಸಾಗಿದೆ. ಒಂದು ತಿಂಗಳ ಹಿಂದೆ ಸೂರ್ಯಕಾಂತಿ ಎಣ್ಣೆ ದರ ಕೆಜಿಗೆ 120 ರೂ. ಇದ್ದದ್ದು ಇದೀಗ 150 ರೂ. ಆಗಿದೆ. ಅದೇ ರೀತಿ ಶೇಂಗಾ ಎಣ್ಣೆ 150 ರೂ. ಇದ್ದದ್ದು 180 ರೂ. ತಲುಪಿದೆ. ಇದೇ ರೀತಿ ಪ್ರತಿ ಎಣ್ಣೆಗಳ ದರ ಏರಿಕೆ ಆಗಿದೆ. ಇದು ದೀಪಾವಳಿ ಹಬ್ಬದ ಮೇಲೂ ಪರಿಣಾಮ ಬೀರಲಿದೆ.
ದೀಪಾವಳಿಗೆ ದರಗಳು ಏರಿಕೆ ಆಗಿದೆ. ಆದರೆ, ದರ ಏರಿಕೆ ಆಗಿದೇ ಅಂತ ನಾವುಗಳು ಹಬ್ಬ ಆಚರಣೆ ಮಾಡದೇ ಇರಲು ಆಗುವುದಿಲ್ಲ. ಹೀಗಾಗಿ ನಾವು ಖರೀದಿ ಮಾಡುತ್ತಿದ್ದೇವೆ. | ಜ್ಞಾನೇಶ್ವರ ಹೆಬ್ಬಳ್ಳಿ ಗ್ರಾಹಕ
| ಮಂಜುನಾಥ ಗದಗಿನ ಬೆಳಗಾವಿ