

ಬೆಳಗಾವಿ: ರಾಜ್ಯದಲ್ಲಿ ಬರಗಾಲ ಘೋಷಿಸಿರುವ ಬೆನ್ನಲ್ಲೇ, ಬರಪೀಡಿದ ತಾಲೂಕುಗಳ ಪಟ್ಟಿಯಲ್ಲಿ ಬೆಳಗಾವಿ ಹಾಗೂ ಖಾನಾಪುರ ತಾಲೂಕುಗಳನ್ನು ಸೇರಿಸದ ಕಾರಣ ಬೆಳೆ ಸಮೀಕ್ಷೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಉಭಯ ತಾಲೂಕುಗಳಲ್ಲಿ ಮಾತ್ರವಲ್ಲದೆ, ಜಿಲ್ಲಾದ್ಯಂತ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲಾದ್ಯಂತ ಮಳೆ ಕೊರತೆಯಿಂದಾಗಿ ಮಳೆಯಾಶ್ರಿತ ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದ್ದಲ್ಲದೆ, ಬೆಳೆಗಳು ಕುಂಠಿತಗೊಂಡಿದ್ದು, ಇಳುವರಿ ಕುಸಿಯುವ ಸಾಧ್ಯತೆ ಇದೆ. ಮಳೆಯಾಶ್ರಿತ ಬೆಳೆಗಳ ಪ್ರದೇಶದಂತೆಯೇ ಭತ್ತ ಬೆಳೆಯುವ ಪ್ರದೇಶಗಳಿಗೂ ಅಷ್ಟೇ ಪ್ರಮಾಣದ ಮಳೆಯನ್ನು ನಿರೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಕೃಷಿ ಇಲಾಖೆ ಅಕಾರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಉಭಯ ತಾಲೂಕಿನ ಕೃಷಿಕರು ಅಸಮಾಧಾನಗೊಂಡಿದ್ದಾರೆ. ನಾಟಿ ಮಾಡುವ ಸಂದರ್ಭದಿಂದ ಹಿಡಿದು ಕೊಯ್ಲು ಮಾಡುವವರೆಗೂ ಭತ್ತದ ಪೈರು ನೀರಿನಲ್ಲೇ ಇರಬೇಕಾಗುತ್ತದೆ. ಆದರೆ, ಅಲ್ಪಸ್ವಲ್ಪ ಮಳೆಯಾಗಿದೆ ಎಂಬ ಕಾರಣದಿಂದಾಗಿ ಬೆಳೆಗೆ ಬೇಕಾದ ನೀರಿನ ಪ್ರಮಾಣ ಹಾಗೂ ಹವಾಮಾನ ಪರಿಗಣಿಸದೆ ಅನ್ನದಾತರಿಗೆ ಅನ್ಯಾಯ ಮಾಡಲಾಗುತ್ತಿದೆ. ಬೆಳೆ ಸಮೀಕ್ಷೆಯಲ್ಲಿ ವಾಡಿಕೆ ಮಳೆ ಮತ್ತು ವಾಸ್ತವ ಮಳೆ ಪ್ರಮಾಣ ಪರಿಗಣಿಸದೆ ಕಾಟಾಚಾರಕ್ಕೆ ಅವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ಮಾಡಲಾಗಿದೆ. ಮತ್ತೊಮ್ಮೆ ಈ ತಾಲೂಕುಗಳಲ್ಲಿ ಪಾರದರ್ಶಕವಾಗಿ ಸಮೀಕ್ಷೆ ನಡೆಸಿ ಬರಪೀಡಿತ ತಾಲೂಕು ೋಷಣೆಗೆ ಕ್ರಮವಹಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.
ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯಿಸಿರುವ ಕೃಷಿ ಇಲಾಖೆ ಅಕಾರಿಯೊಬ್ಬರು, ಮಾರ್ಗಸೂಚಿಯಂತೆ ಸಮೀಕ್ಷಾ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಖಾನಾಪುರ, ಬೆಳಗಾವಿ ತಾಲೂಕಿನಲ್ಲಿ ವಾಡಿಕೆ ಮತ್ತು ವಾಸ್ತವ ಮಳೆ ಪ್ರಮಾಣ, ಭತ್ತದ ಬೆಳವಣಿಗೆ, ಇಳುವರಿ ಸಮೀಕ್ಷೆ, ರೈತರ ಅಭಿಪ್ರಾಯ ಪರಿಗಣಿಸುವುದರ ಬಗ್ಗೆ ಪ್ರತಿಕ್ರಿಯಿಸಲು ಕೃಷಿ ಇಲಾಖೆ ಅಕಾರಿಗಳು ನಿರಾಕರಿಸಿದ್ದಾರೆ.
ಸರ್ಕಾರವೇ ಜಿಲ್ಲೆಯ 13 ತಾಲೂಕುಗಳಲ್ಲಷ್ಟೇ ಸಮೀಕ್ಷೆ ನಡೆಸಿ ವರದಿಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಆಯಾ ತಾಲೂಕಿನಲ್ಲಿನ ಎರಡು ಪ್ರಮುಖ ಬೆಳೆಗಳ ಸ್ಥಿತಿಗತಿ ಬಗ್ಗೆ ಅಲ್ಲಿನ ಐದು ವಿಭಿನ್ನ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಿದ್ದೇವೆ. ಬಹುತೇಕ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆಯೂ ಕುಂಠಿತವಾಗಿದೆ. ಬೈಲಹೊಂಗಲ, ಕಿತ್ತೂರು, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ 45 ಕಾಯಿಗಳನ್ನು ಬಿಡಬೇಕಿದ್ದ ಸೋಯಾಬೀನ್ ಬೆಳೆ 15-20 ಕಾಯಿ ಬಿಟ್ಟಿರುವುದು ಕಂಡು ಬಂದಿದೆ. ಅಲ್ಲದೆ, ಅಥಣಿ, ಮೂಡಲಗಿ, ಗೋಕಾಕ, ಯರಗಟ್ಟಿ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ, ರಾಯಬಾಗ ಹಾಗೂ ಹುಕ್ಕೇರಿ ತಾಲೂಕುಗಳಲ್ಲಿ ಸೋಯಾಬೀನ್, ಹೆಸರು ಹಾಗೂ ಉದ್ದು ಸೇರಿದಂತೆ 40-50 ಕಾಯಿಕಟ್ಟಬೇಕಿದ್ದ ಬೆಳೆಗಳು ಕೇವಲ 20-25 ಕಟ್ಟಿವೆ. ಅಲ್ಲಲ್ಲಿ ಭತ್ತದ ಬೆಳೆಯೂ ಕುಂಠಿತವಾಗಿ ಇಳುವರಿಯೂ ಅರ್ಧಕ್ಕಿಂತ ಹೆಚ್ಚು ಕುಸಿದಿದೆ. ಅಲ್ಲದೆ, ಅಂತರ್ಜಲ ಮಟ್ಟ ಹಾಗೂ ತೇವಾಂಶದ ಕೊರತೆಯೂ ಕಂಡು ಬಂದಿದೆ. ಹೀಗಾಗಿ ಅವುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ ಪರಿಗಣಿಸಲಾಗಿದೆ ಎಂದು ಸಮೀಕ್ಷೆ ನಡೆಸಿದ ಅಕಾರಿಯೊಬ್ಬರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳೆಂದು ಇದೀಗ ಘೊಷಣೆಯಾಗಿರುವ 195 ತಾಲೂಕುಗಳನ್ನು ಹೊರತುಪಡಿಸಿ ಇನ್ನೂ ಹೆಚ್ಚಿನ ತಾಲೂಕುಗಳನ್ನು ಘೋಷಿಸಲು ಅವಕಾಶವಿದೆ ಎಂದು ಕೃಷಿ ಸಚಿವ ಕೃಷ್ಣೆ ಬೈರೇಗೌಡ ಹೇಳಿದ್ದು, ಅಕ್ಟೋಬರ್ ಕೊನೆಯವರೆಗೆ ಬೆಳೆ ಸಮೀಕ್ಷೆ ಮಾಡಿ ಬರ ಘೊಷಣೆ ಮಾಡಬಹುದು ಎನ್ನುವುದೇ ಕೊಂಚ ಆಶಾವಾದ ಮೂಡಿಸಿದೆ. ಅಕಾರಿಗಳು ಈಗಲೆ ಮತ್ತೊಮ್ಮೆ ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಬೆಳಗಾವಿ ಹಾಗೂ ಖಾನಾಪುರ ರೈತರು ಒತ್ತಾಯಿಸಿದ್ದಾರೆ.
ಜಿಲ್ಲೆಯ ರೈತರಿಗೆ ಹೆಚ್ಚಿನ ಸವಲತ್ತು ಒದಗಿಸಲು ಜಿಲ್ಲಾಡಳಿತ ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ, ಕೇಂದ್ರ ಸರ್ಕಾರದ ಮಾನದಂಡಗಳಲ್ಲಿ ಉಪಗ್ರಹ ಆಧಾರಿತ ದತ್ತಾಂಶಗಳ ಪ್ರಕಾರ ಮಣ್ಣಿನ ತೇವಾಂಶ ಮತ್ತು ಅಂತರ್ಜಲ ಮಟ್ಟದ ಆಧಾರದಲ್ಲಿ ಖಾನಾಪುರ ಹಾಗೂ ಬೆಳಗಾವಿ ತಾಲೂಕುಗಳ ಸಮೀಕ್ಷೆಗೆ ಸರ್ಕಾರ ಸೂಚಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಈ ತಾಲೂಕುಗಳಲ್ಲೂ ಸಮೀಕ್ಷೆ ನಡೆಸುವಂತೆ ಸೂಚಿಸಿದರೆ, ವರದಿ ಸಲ್ಲಿಸಲಾಗುವುದು.| ನಿತೇಶ ಪಾಟೀಲ, ಜಿಲ್ಲಾಕಾರಿ ಬೆಳಗಾವಿ ಬೆಳಗಾವಿ ಹಾಗೂ ಖಾನಾಪುರ ತಾಲೂಕಿನಲ್ಲಿ ವೈಜ್ಞಾನಿಕವಾಗಿ ಬೆಳೆಗಳ ಸಮೀಕ್ಷೆ ಮಾಡದೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವ ತಪ್ಪಿತಸ್ಥ ಅಕಾರಿಗಳನ್ನೇ ಹೊಣೆಯನ್ನಾಗಿಸಿ ಕ್ರಮ ಜರುಗಿಸಬೇಕು. ಎರಡೂ ತಾಲೂಕುಗಳನ್ನು ಬರಪೀಡಿತವೆಂದು ೋಷಿಸಬೇಕು.| ಸಿದಗೌಡ ಮೋದಗಿ, ರಾಜ್ಯಾಧ್ಯಕ್ಷ, ಭಾರತೀಯ ಕೃಷಿಕ ಸಮಾಜ | ರವಿ ಗೋಸಾವಿ ಬೆಳಗಾವಿ