

ಖಾನಾಪುರ: ಅರಣ್ಯ ಇಲಾಖೆ ಅಭಿವದ್ಧಿ ಕಾಮಗಾರಿಗಳಿಗೆ ಅನುಮತಿ ನೀಡದ ಕಾರಣ ತಾಲೂಕಿನ ಪಶ್ಚಿಮ ಭಾಗದ ಹಲವು ಗ್ರಾಮಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಡಾಂಬರ್ ರಸ್ತೆ, ನೀರು ಸರಬರಾಜು ಯೋಜನೆ ಮತ್ತು ವಿದ್ಯುತ್ ಮಾರ್ಗಗಳ ಅಳವಡಿಕೆ ಕೆಲಸಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು ಎಂದು ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದರು.
ವಿಧಾನಸೌಧದಲ್ಲಿ ಈಚೆಗೆ ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಚಿವರನ್ನು ಭೇಟಿ ಮಾಡಿ ಅಭಿವದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ವಿನಂತಿಸಿದರು. ಖಾನಾಪುರ ತಾಲೂಕಿನ ಪಶ್ಚಿಮ ಭಾಗದಲ್ಲಿರುವ ಮನ್, ಹುಲಂದ್ ಹಾಗೂ ಜಾಂಬೋಟಿ, ಕಣಕುಂಬಿ ಭಾಗದ ಅಭಿವದ್ಧಿಯ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಡ್ಡಿಯಾಗಬಾರದು. ರಸ್ತೆಗಳು ಮತ್ತು ಸೇತುವೆಗಳ ಕೊರತೆಯಿಂದಾಗಿ ಅನೇಕ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ ಮತ್ತು ಹಲವು ಸೇವೆಗಳು ಸಿಗುತ್ತಿಲ್ಲ. ಕಾಡು ಪ್ರಾಣಿಗಳ ದಾಳಿ ಮತ್ತು ಭಾರಿ ಮಳೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ಗ್ರಾಮ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರಿಗೆ ಸಮಸ್ಯೆಗಳನ್ನು ಮನದಟ್ಟು ಮಾಡಿಸಿದರು. ಅಭಿವದ್ಧಿಗೆ ಸಹಕಾರ ನೀಡುವಂತೆ ವಿನಂತಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಈ ಸಮಸ್ಯೆಯ ಬಗ್ಗೆ ಗಮನ ಹರಿಸುವ ಜತೆಗೆ ಈ ಪ್ರದೇಶಗಳಲ್ಲಿ ಮೂಲಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಭೂ ನ್ಯಾಯ ಮಂಡಳಿ ಸದಸ್ಯ ವಿನಾಯಕ ಮುತಗೇಕರ ಇತರರಿದ್ದರು.