

ಗೋಕಾಕ: ಸತತವಾಗಿ ನಾಲ್ಕು ಬಾರಿ ಗೋಕಾಕ ನಾಡಿನ ಅಳಿಯನಿಗೆ ನಿಮ್ಮ ಅಮೂಲ್ಯ ಮತ ನೀಡಿ ಗೆಲ್ಲಿಸಿದ್ದೀರಿ. ಸುರೇಶ ಅಂಗಡಿ ಅವರ ಯೋಜನೆಗಳನ್ನು ಜಾರಿಗೊಳಿಸಲು ಈ ಬಾರಿ ನನಗೆ ಅವಕಾಶ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಕೋರಿದ್ದಾರೆ.
ನಗರದ ಶೂನ್ಯ ಸಂಪಾದನಾ ಮಠಕ್ಕೆ ಶನಿವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪ್ರಚಾರ ನಡೆಸಿ ಮಾತನಾಡಿ, ನನ್ನ ಪತಿ ಸುರೇಶ ಅಂಗಡಿ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸುಮಾರು 57 ಸಾವಿರ ಕೋಟಿ ರೂ. ಅನುದಾನ ಮಂಜೂರು ಮಾಡಿಸಲು ಶ್ರಮಿಸಿದ್ದರು. ಅವರಂತೆ ನನಗೂ ಜನಸೇವೆ ಮಾಡುವ ಆಸೆಯಿದೆ. ಮತದಾರರು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸುರೇಶ ಅಂಗಡಿ ಅವರು ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು.
ಮಾಜಿ ಶಾಸಕ ಎಂ.ಎಲ್.ಮುತ್ತೆಣ್ಣವರ, ಶೃದ್ಧಾ ಶೆಟ್ಟರ್, ಶಾಮಾನಂದ ಪೂಜೇರಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸದಸ್ಯ ಲಕ್ಷ್ಮೀ ದೇಶನೂರ, ಜಯಾನಂದ ಮುನವಳ್ಳಿ, ಸುರೇಶ ಸನದಿ, ಬಸವರಾಜ ಹಿರೇಮಠ, ಪ್ರೇಮಾ ಭಂಡಾರಿ, ಶ್ರೀದೇವಿ ತಡಕೋಡ, ಕುಸಮಾ ಖನಗಾವಿ, ರಾಜೇಶ್ವರಿ ವಡೆಯರ ಸೇರಿದಂತೆ ಅನೇಕರು ಇದ್ದರು.