

ಬೆಂಗಳೂರು: ಕೋವಿಡ್ ಸೋಂಕಿನಿಂದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದ ಪ್ರತಿ ಐವರು ರೋಗಿಗಳಲ್ಲಿ ಮೂವರನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗಿಂತ ನಾಲ್ಕು ಪಟ್ಟು ಅಧಿಕ ಚಿಕಿತ್ಸಾ ದರ ವಿಧಿಸಿವೆ. ರಾಜ್ಯದ ಒಟ್ಟು ಸೋಂಕಿತರಲ್ಲಿ ನ.23ರವರೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ 1,28,436 ರೋಗಿಗಳು ಚಿಕಿತ್ಸೆ ಪಡೆದಿದ್ದು, ಇವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 73,511 (ಶೇ. 57.2) ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಪಡೆದರೆ, 54,925 (ಶೇ. 42.8) ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕೋವಿಡ್ ಆರಂಭದ ದಿನಗಳಲ್ಲಿ ಸೋಂಕಿತರೆಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಜೂನ್ ನಂತರದಲ್ಲಿ ಸೋಂಕು ಹೆಚ್ಚಳವಾದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಸಿಗೆಗಳನ್ನು ಮೀಸಲಿರಿಸಲಾಯಿತು. ಆ ನಂತರದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ ಹೆಚ್ಚಳವಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ನಡುವೆ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.
ಖಾಸಗಿ ಆಸ್ಪತ್ರೆಗಳಿಗೆ 484 ಕೋಟಿ ರೂ.: ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರಿಗಾಗಿ ಈವರೆಗೆ ಒಟ್ಟು 598 ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 484 ಕೋಟಿ ರೂ. ಚಿಕಿತ್ಸಾ ವೆಚ್ಚವಾಗಿದೆ. ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ 114 ಕೋಟಿ ರೂ. ಮಾತ್ರ! ಬೆಂಗಳೂರು ಒಂದರಲ್ಲೇ 52,967 ರೋಗಿಗಳು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರಾಗಿದ್ದಾರೆ. ಈವರೆಗೂ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸೆ ಪಡೆದಿರುವ ರೋಗಿಗಳಲ್ಲಿ 35,187 ಮಂದಿಯ ಚಿಕಿತ್ಸಾ ವೆಚ್ಚ 146.6 ಕೋಟಿ ರೂ. ಮರುಪಾವತಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 14,564 ರೋಗಿಗಳ ಚಿಕಿತ್ಸೆಯ ವೆಚ್ಚ 19.7 ಕೋಟಿ ರೂ. ನೀಡಲಾಗಿದೆ. ಬಾಕಿ ಇರುವ ಬಿಲ್ಗಳ ಪಾವತಿ ಕಾರ್ಯ ವಿವಿಧ ಹಂತಗಳಲ್ಲಿವೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಅಧಿಕಾರಿಗಳು ತಿಳಿಸಿದ್ದಾರೆ.
ಒತ್ತಡ ಇರಲಿಲ್ಲ: ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಹಾಗೂ ಐಸಿಯ ಚಿಕಿತ್ಸೆಯ ಸೌಲಭ್ಯದ ಕೊರತೆಯಿಂದಾಗಿ, ಸೋಂಕಿತ ಪ್ರಕರಣಗಳ ತೀವ್ರತೆ ಆಧರಿಸಿ ರೋಗಿಗಳನ್ನು ಖಾಸಗಿಗೆ ರೆಫರ್ ಮಾಡಲಾಗಿದೆ. ಕೆಲವೊಂದು ಸಂದರ್ಭದಲ್ಲಿ ರೋಗಿಗಳ ಇಚ್ಛೆಯಂತೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆಯಾದರೂ, ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿ ಎಂಬ ಒತ್ತಡ ಶೇ. 4-5 ಇರಬಹುದಷ್ಟೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿರುವ ಬಗ್ಗೆ ನಿಖರ ಮಾಹಿತಿ ಇಲ್ಲ. ದೇಶದಲ್ಲಿ ಶೇ. 70 ಆರೋಗ್ಯ ಸೇವೆ ಖಾಸಗಿ ವಲಯದಿಂದಲೇ ದೊರೆಯುತ್ತಿದ್ದು, ಕೋವಿಡ್ ವಿಚಾರದಲ್ಲಿ ಇದು ನಿಜವಾಗಿದೆ. ಉತ್ತಮ ಸೌಕರ್ಯ ಹಾಗೂ ಗುಣಮಟ್ಟದ ಚಿಕಿತ್ಸೆಗಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
| ಡಾ. ಪ್ರಸನ್ನ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘಟನೆ (ಫಾನಾ) ಅಧ್ಯಕ್ಷ