

ಅಥಣಿ ಗ್ರಾಮೀಣ: ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು ರೈತರ ಜೀವನಾಡಿಯಾಗಿವೆ. ಸಹಕಾರ ತತ್ತ್ವದ ಉದ್ದೇಶ ಅರಿತುಕೊಳ್ಳುವ ಮೂಲಕ ಸಹಕಾರಿ ಪ್ರಗತಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಬಡಚಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೃಷಿ, ಸ್ವ-ಸಹಾಯ ಸಂಘಗಗಳಿಗೆ ಸಾಲ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ 154 ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ಇವೆ. ಅವುಗಳಲ್ಲಿ 80 ಸಾವಿರ ರೈತರಿಗೆ 523 ಕೋಟಿ ರೂ. ಕೃಷಿಸಾಲ, 700 ಸದಸ್ಯರಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ 1.88 ಕೋಟಿ ರೂ. ಸಾಲ ನೀಡಲಾಗಿದೆ. ಫಲಾನುಭವಿಗಳು ಸದುಪಯೋಗ ಪಡೆದುಕೊಂಡು ಸಕಾಲದಲ್ಲಿ ಸಾಲ ಮರುಪಾವತಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕೌಲಗುಡ್ಡದ ಅಮರೇಶ್ವರ ಮಹಾರಾಜರು ಹಾಗೂ ಯಕ್ಕಂಚಿಯ ಗುರುಪಾದ ಸ್ವಾಮೀಜಿ ಮಾತನಾಡಿ, ಸಾಲ ಪಡೆದು ಹೈನುಗಾರಿಕೆ ಹಾಗೂ ಇನ್ನಿತರೆ ಚಟುವಟಿಕೆ ಕೈಗೊಂಡು ಒಳ್ಳೆಯ ಜೀವನ ಸಾಗಿಸಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ಉಪಪ್ರಧಾನ ವ್ಯವಸ್ಥಾಪಕ ಎನ್.ಜಿ.ಕಲಾವಂತ ಮಾತನಾಡಿದರು. ಅಥಣಿ ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ, ಸಂಘದ ಅಧ್ಯಕ್ಷ ಸೈಬಣ್ಣ ಕಮತಗಿ, ವಕೀಲ ಅಮೋಘ ಖೋಬ್ರಿ, ರಮೇಶ ಗಲಗಲಿ, ಯೋಗೇಶ ಕುಲಕರ್ಣಿ, ಸಿ.ಎಸ್.ನೇಮಗೌಡ, ರಾಮಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಬೀರಪ್ಪ ಪೂಜಾರಿ, ಮಲ್ಲಪ್ಪ ಆಜೂರ, ಯಲಿಹಡಲಿ ಗ್ರಾಪಂ ಅಧ್ಯಕ್ಷೆ ರೇಖಾ ಗೋಂಧಳಿ, ಶ್ರೀಶೈಲ ನಾಯಿಕ, ಮಹಾದೇವ ನಾಗನೂರ ಇತರರಿದ್ದರು. ಶಿವಯ್ಯ ಪೂಜಾರಿ ಸ್ವಾಗತಿಸಿದರು. ಶಂಕರ ಕಮತಗಿ ನಿರೂಪಿಸಿದರು. ಕಲ್ಲಪ್ಪ ಖೋತ ವಂದಿಸಿದರು.