

ಬೆಳಗಾವಿ: ಕರೊನಾ ಹಾವಳಿ, ಲಾಕ್‌ಡೌನ್ ಕಾರಣದಿಂದ ಹೆಚ್ಚು ಆದಾಯವಿಲ್ಲದೆ ಸೊರಗಿದ್ದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಆದಾಯ ತುಸು ನೆಮ್ಮದಿ ತಂದಿದೆ. ಆಡಳಿತದಲ್ಲಿ ವಿವಿಧ ಖರ್ಚು-ವೆಚ್ಚ ಸರಿದೂಗಿಲು ಹೆಣಗಾಡುತ್ತಿದ್ದ ಸರ್ಕಾರಕ್ಕೆ ಈಗ ಬರುತ್ತಿರುವ ಆದಾಯದಿಂದ ತುಸು ಶಕ್ತಿ ಬಂದಂತಾಗಿದೆ.
ಆಸ್ತಿಗಳ ನೋಂದಣಿ ಇಳಿಕೆ, ಕೋವಿಡ್-19 ಕಾರಣದಿಂದ ಲಾಕ್‌ಡೌನ್ ೋಷಣೆ ಬಳಿಕ ಸರ್ಕಾರದ ಖಜಾನೆ ಯಾವುದೇ ಮೂಲದಿಂದಲೂ ಭರ್ತಿಯಾಗುತ್ತಿರಲಿಲ್ಲ. ಇದೀಗ ಲಾಕ್‌ಡೌನ್ ಬಳಿಕ 5 ತಿಂಗಳ ಅವಧಿಯಲ್ಲಿ ಜಿಲ್ಲೆಯ ಖಜಾನೆಗೆ 44 ಕೋಟಿ ರೂ. ಆದಾಯ ಬಂದಿದೆ.
ಆದಾಯ ಶೇ.50 ಇಳಿಕೆ: 2019-20ನೇ ಸಾಲಿಗೆ ಹೋಲಿಸಿದರೆ ಈ ಐದು ತಿಂಗಳ ಅವಧಿಯಲ್ಲಿ ಶೇ.50 ಆದಾಯ ಇಳಿಕೆಯಾಗಿದೆ.
ಕರೊನಾ ಕಾಲಿಟ್ಟ ಗಳಿಗೆಯಿಂದ ನಷ್ಟದಲ್ಲಿದ್ದ ಸರ್ಕಾರದ ಆದಾಯದ ಮೂಲ ಆಗಿರುವ ಮುದ್ರಾಂಕ ಹಾಗೂ ನೋಂದಣಿ
ಪ್ರಕ್ರಿಯೆ ಇದೀಗ ಚೇತರಿಸಿಕೊಳ್ಳುತ್ತಿರುವುದು ಆರ್ಥಿಕತೆ ಬೆಳವಣಿಗೆ ಆಗುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ.
ದೇಶದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿದ ಬಳಿಕ ಏಪ್ರಿಲ್ 24ರಿಂದಲೇ ಆಸ್ತಿ ನೋಂದಣಿ ಸ್ಥಗಿತವಾಗಿತ್ತು. ಬಳಿಕ ಮೇ ಎರಡನೇ ವಾರದಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು. ಹಾಗಾಗಿ ಮೇ ತಿಂಗಳಲ್ಲಿ 2.89 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಬಳಿಕ ಲಾಕ್‌ಡೌನ್ ಪೂರ್ವದಲ್ಲಿಯೇ ಮಾರಾಟವಾಗಿದ್ದ ಆಸ್ತಿಗಳು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಖರೀದಿಯಾಗಿದ್ದರಿಂದ 18.20 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಬಳಿಕ ರಜೆ ಇತರ ಕಾರಣಗಳಿಂದ ಆದಾಯ ಸ್ವಲ್ಪ ಇಳಿಕೆ ಕಂಡಿದೆ.
ಆಸ್ತಿ ಮಾರಾಟದಲ್ಲಿ ಏರಿಳಿತ: ನಾಲ್ಕೈದು ವರ್ಷಗಳ ಅವಧಿಗೆ ಹೋಲಿಸಿದರೆ 2020ನೇ ಸಾಲಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗಳ ಮಾರಾಟ ಮತ್ತು ಖರೀದಿಯಲ್ಲಿ ಶೇ. 42ರಷ್ಟು ಕಡಿಮೆಯಾಗಿದೆ. ಕೋವಿಡ್-19 ವಕ್ಕರಿಸಿದ ನಂತರದ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ನಿವೇಶನ ಖರೀದಿ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ, ನಿವೇಶನಗಳ ಮಾರಾಟಕ್ಕೂ ಸಹ ಯಾರೂ ಮುಂದೆ ಬರುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ, ನಿವೇಶನ ಖರೀದಿ ಎಂದಿನಂತೆ ನಡೆಯುತ್ತಿದೆ. ಕರೋನಾ ಸೋಂಕು ಸಂಪೂರ್ಣ ನಿಯಂತ್ರಣ ಹಾಗೂ ವ್ಯಾಪಾರ- ವಹಿವಾಟು ವೇಗ ಪಡೆಯುವವರೆಗೆ ಆಸ್ತಿಗಳ ಖರೀದಿ, ಮಾರಾಟದಲ್ಲಿ ಏರಿಳಿತ ಉಂಟಾಗಲಿದೆ ಎಂದು
ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಆದಾಯದಲ್ಲಿ ಇಳಿಕೆಯಾಗಿದೆ. 2019-20ನೇ ಸಾಲಿನ ಅವಧಿಗೆ ಹೋಲಿಸಿದರೆ ಐದು ತಿಂಗಳ ಅವಧಿಯಲ್ಲಿ ಶೇ. 50 ಆದಾಯ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಆಸ್ತಿ ನೋಂದಣಿ ಹೆಚ್ಚಾಗುತ್ತಿದ್ದು, ಡಿಸೆಂಬರ್ ಅಂತ್ಯದೊಳಗೆ ವಾರ್ಷಿಕ ಗುರಿ ಮುಟ್ಟುವ ವಿಶ್ವಾಸವಿದೆ. | ವಿಷ್ಣುತೀರ್ಥ ಉಪ ನೋಂದಣಾಧಿಕಾರಿ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ