ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲಿ

17ATHANIGRAMIN2A
Published on

ಅಥಣಿ ಗ್ರಾಮೀಣ: ಯಾವ ಮನುಷ್ಯನಿಗೆ ಸಂಸ್ಕಾರವಿಲ್ಲವೋ ಆತ ಪಶುವಿಗೆ ಸಮಾನ, ಗರ್ಭಾವಸ್ಥೆಯಲ್ಲಿಯೇ ಒಳ್ಳೆಯ ಸಂಸ್ಕಾರ ನೀಡಿದರೆ ಹುಟ್ಟುವ ಮಗು ಬೆಳೆದು ಆದರ್ಶ, ಪ್ರಾಮಾಣಿಕ ವ್ಯಕ್ತಿಯಾಗಿ ಹೊರಹೊಮ್ಮತ್ತಾರೆ ಎಂದು ನಾಂದಣಿ ಪ.ಪೂ ಜಗದ್ಗುರು ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಚಕಲ್ಯಾಣ ಮಹಾಮಹೋತ್ಸವದ ಗರ್ಭಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀನೆಂದ್ರ ಭಗವಂತ ಹುಟ್ಟುವ ಮೊದಲು ಸ್ವರ್ಗ ಮತ್ತು ನರಕದಲ್ಲಿ ಸಾಕಷ್ಟು ಬದಲಾವಣೆಗಳಾದವು. ನರಕದಲ್ಲೂ ಕೂಡ ಶಾಂತಿ, ಸಂತೋಷ ಉಂಟಾಯಿತು. ನಮ್ಮ ದುಃಖ, ಬಡತನ ಕಾರ್ಯಕ್ಕೆ ಸಂಸ್ಕಾರದ ಕೊರತೆ ಕಾರಣವಾಗಿದೆ. ಶಾಂತಿ ಮತ್ತು ತ್ಯಾಗದಲ್ಲಿ ಪುಣ್ಯವಿದೆ ಎಂದು ಕಲಿಸಿದ ಜೈನ ಧರ್ಮ ಪರಮಶ್ರೇಷ್ಠ ಎನಿಸುತ್ತದೆ ಎಂದರು.

ಸಾಧನರತ್ನ ಆಚಾರ್ಯ ಪ.ಪೂ ಶ್ರೀ 108 ಅಮೀತಸೇನ ಮುನಿ ಮಹಾರಾಜರು ಮಾತನಾಡಿ, ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲಾಗಿದ್ದು, ಆದಿಕಾಲದಿಂದಲೂ ನಮ್ಮ ದೇಶದಲ್ಲಿ ಸ್ತ್ರೀಯರಿಗೆ ಪೂಜ್ಯನೀಯ ಸ್ಥಾನ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಗುರು ಒಳ್ಳೆಯವನಾಗಿರಬೇಕು. ಹಾಗೆ ಸಂಸ್ಕಾರ ನೀಡಲು ಮನೆಯಲ್ಲಿ ತಾಯಿ ಸಂಸ್ಕಾರವಂತಳಾಗಬೇಕು. ಸಂಸ್ಕಾರವಿಲ್ಲದ ಶಿಕ್ಷಣ, ಅಡಿಪಾಯವಿಲ್ಲದ ಮನೆಯಂತೆ, ಅದು ಯಾವಾಗ ಬೇಕಾದರೂ ಬೀಳಬಹುದು ಎಂದರು.

ಬಳಿಕ ಪಂಚಾಮತ ಅಭಿಷೇಕ, ಮಹಾಶಾಂತಿಮಂತ್ರ, ಮಂಗಲವಾಧ್ಯ ಘೋಷ, ಸುಪ್ರಭಾತ ಸ್ತೋತ್ರ, ಮಹಾಯಾಗಮಂಡಲ ಆರಾಧನಾ, ಸವಾಲ ಕಾರ್ಯಕ್ರಮಗಳು ಜರುಗಿದವು.

ಪ.ಪೂ. ಬಾಲಾಚಾರ್ಯ ಧರ್ಮಪ್ರಭಾವಕ ಶ್ರೀ 108 ಸಿದ್ಧಸೇನ ಮುನಿಮಹಾರಾಜರು, ಪ.ಪೂ, ಶ್ರೀ 108 ವಾತ್ಸಲ್ಯಮೂರ್ತಿ ಸಮುದ್ರಸೇನ ಮಹಾರಾಜರು, ಪ.ಪೂ ಶ್ರೀ 108 ಮಲ್ಲಿಸೇನ ಮುನಿಮಹಾರಾಜರು, ಪ.ಪೂ ಶ್ರೀ 105 ಅಕಲಂಕಸೇನ ಮಹಾರಾಜರು, ಪ.ಪೂ 105 ಅಕ್ಷಯಸೇನ ಮಹಾರಾಜರು, ಬಾಹುಬಲಿ ಉಪಾಧ್ಯೆ, ಪ್ರದೀಪ ಉಪಾಧ್ಯೆ, ಅಪ್ಪಾಸಾಬ ಉಪಾಧ್ಯೆ ಹಾಗೂ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿಯವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net