

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಎಂ.ಬಸಾಪುರದ ರಂಗನೇಸರ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಗ್ರಾಮೀಣ ರಂಗೋತ್ಸವ-2024 ಕಾರ್ಯಕ್ರಮ ನಡೆಯಿತು.
ಮೆಟ್ರಿಯ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಎಚ್.ಜಗದೀಶ ಗ್ರಾಮೀಣ ರಂಗೋತ್ಸವಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಶಿಕ್ಷಣದೊಂದಿಗೆ ಜನಪದ ಕಲೆಗಳನ್ನು ಕಲಿಸುವ ಅಗತ್ಯತೆಯಿದೆ. ಜನಪದ ಕಲೆಯನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕಲಿಸುವಲ್ಲಿ ಶಿಕ್ಷಕರು ಆದ್ಯತೆ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷ ಸಿ.ಡಿ.ಗುಂಡಮ್ಮ ಚೌಡಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸುವ ಮೂಲಕ ಗ್ರಾಮೀಣ ಕಲೆ ಸಂರಕ್ಷಿಸಬೇಕಿದೆ ಎಂದರು.
ಗ್ರಾಮೀಣ ರಂಗೋತ್ಸವದಲ್ಲಿ ಮಾವಿನಹಳ್ಳಿಯ ಕೆ.ಹೇಮೇಶ್ವರ ತಂಡದಿಂದ ಜಾನಪದ ಗೀತೆ ಗಾಯನ, ಕೆ.ನಾಗರಾಜ ತಂಡದಿಂದ ತತ್ವಪದ ಹಾಡುಗಾರಿಕೆ, ಕೆ.ನಾಗವೇಣಿ ತಂಡದಿಂದ ಸಮೂಹ ನೃತ್ಯ, ಕೆ.ಹನುಮಂತ ರೆಡ್ಡಿ ತಂಡದ ಕಲಾವಿದರಿಂದ ಅಭಿಮನ್ಯು ಕಾಳಗದಲ್ಲಿ ಶ್ರೀಕೃಷ್ಣ ಅರ್ಜುನ ಪ್ರಸಂಗ ಪ್ರದರ್ಶನಗೊಂಡಿತು.
ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ, ಪ್ರಮುಖರಾದ ನೇಣ್ಕಿ ಗಿರೀಶ, ಕುರುಬರ ಹೇಮೇಶ್ವರ, ಕಲಾವಿದರಾದ ಬಿ.ಸಿದ್ದಪ್ಪ ಧರ್ಮಪ್ಪ, ಕೆ.ವೀರೇಶ, ಅಂಜನಪ್ಪ, ಮೌನೇಶ ಇತರರಿದ್ದರು.