

ದೇವದುರ್ಗ: ಶಿಕ್ಷಕರು ಮಕ್ಕಳಿಗೆ ಅಕ್ಷರಜ್ಞಾನ ಕಲಿಸುವ ಜತೆಗೆ ಮಾನವೀಯ ಮೌಲ್ಯಗಳ ಒಳಗೊಂಡ ಸಂಸ್ಕಾರ ಬಿತ್ತಬೇಕು ಎಂದು ನಿವೃತ್ತ ಬಿಇಒ ಆರ್.ಇಂದಿರಾ ಹೇಳಿದರು.
ತಾಲೂಕಿನ ಮಾನಸಗಲ್ ಶ್ರೀಲಕ್ಷ್ಮೀರಂಗನಾಥ ಕಲ್ಯಾಣ ಮಂಪಟದಲ್ಲಿ ಮಲದಕಲ್ ಗೆಳೆಯರ ಬಳಗ ಹಾಗೂ ಜ್ಞಾನವೃಕ್ಷ ಶಿಕ್ಷಣ, ಸಾಮಾಜಿಕ ಸೇವಾ ಟ್ರಸ್ಟ್ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಸಮಾಜಮುಖಿ ಶಿಕ್ಷಕ ಹಾಗೂ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮಕ್ಕಳು ಓದು-ಬರಹದ ಸಮಸ್ಯೆ ಎದುರಿಸುತ್ತಿದ್ದಾರೆ. ಅಕ್ಷರಜ್ಞಾನ ಕೊರತೆಯನ್ನು ಶಿಕ್ಷಕರು ನೀಗಿಸಬೇಕಿದೆ. ಒಂದೆರಡು ಮಕ್ಕಳು ರ‌್ಯಾಂಕ್ ಪಡೆಯುವಂತೆ ಶಿಕ್ಷಣ ನೀಡುವುದು ಗುಣಮಟ್ಟದ ಬೋಧನೆಯಲ್ಲ. ರ‌್ಯಾಂಕ್ ಬಾರದಿದ್ದರೂ ಎಲ್ಲರೂ ಓದುಬರಹ ಕಲಿಯುವುದು ಮುಖ್ಯ. ಪ್ರತಿ ಮಗುವಿಗೂ ಅರಿವು ಎನ್ನುವ ಅಕ್ಷರ, ಮಾನವೀಯ ಮೌಲ್ಯ ಎನ್ನುವ ಅಂಶ ಬಿತ್ತುವ ಕೆಲಸ ಶಿಕ್ಷಕರು ಮಾಡಬೇಕು. ಶಿಕ್ಷಕರು ಸದಾಕಾಲ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು ಎಂದರು.
ಶಿಕ್ಷಣಪ್ರೇಮಿ ಚನ್ನಪ್ಪ ಬೂದಿನಾಳ ಮಾತನಾಡಿದರು. ಪ್ರಮುಖರಾದ ನಾಗರಾಜ ಪೂಜಾರಿ, ಬಾಬುಅಲಿ ಕರಿಗುಡ್ಡ, ವಿನೋದ್‌ಕುಮಾರ್, ಆಂಜನೇಯ, ಆಂಜನಪ್ಪ ಚೆಂದನಕೇರಿ ಇತರರಿದ್ದರು.
ಪ್ರಶಸ್ತಿ ವಿತರಣೆ: ಸಿಆರ್‌ಪಿ ಶ್ರೀಶೈಲ ತಳವಾರ, ಶಿಕ್ಷಕರಾದ ರಾಮಪ್ಪ, ಮಮತಾ ಆದಿ, ಶೋಭಾ ನಾಯಕ, ಅಮರೇಶ, ಪಂಪಾದೇವ, ಲತಾ, ಮಹಾಂತೇಶ, ಶಂಭುಲಿಂಗಪ್ಪ ಬಳಿಗಾರ, ಸಾಜೀದಾ ಬೇಗಂ, ಮಂಜುಳಾ ಸಿ.ಎನ್, ರೇವಣಸಿದ್ದಯ್ಯ ಪಂಜಿನ ಪೂಜಾರಿ, ಶಿವರಾಜ, ಬಸವರಾಜ ಯಾಟಗಲ್, ಕವಿತಾ, ಪ್ರವೀಣ್‌ಕುಮಾರ ಭಂಡಾರಿ, ಹನುಮೇಶಗೆ ಸಮಾಜಮುಖಿ ಶಿಕ್ಷಕ ಪ್ರಶಸ್ತಿ ನೀಡಲಾಯಿತು.
ಅಗ್ರಹಾರ ಸರ್ಕಾರಿ ಪ್ರಾಥಮಿಕ ಶಾಲೆ, ಗೋಪಳಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಂಗಿ ಸರ್ಕಾರಿ ಪ್ರೌಢಶಾಲೆ, ಗಬ್ಬೂರು ಮುರಾರ್ಜಿ ದೇಸಾಯಿ ವಸತಿ ಶಾಲೆ, ಹಿರೇಬೂದೂರು ಚಂದನ ಕಿರಿಯ ಪ್ರಾಥಮಿಕ ಶಾಲೆ, ರೆಹಮಾನಿಯಾ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ, ವಾಗ್ದೇವಿ ಪ್ರೌಢ ವಿದ್ಯಾಮಂದಿರ, ದೇವರಗುಡ್ಡದ ಶ್ರೀಶರಣ ಅಮಾತೇಶ್ವರ ಪ್ರೌಢಶಾಲೆಗೆ ಸಮಾಜಮುಖಿ ಶಿಕ್ಷಣ ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಲಾಯಿತು.