

ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಮಾ. 23ರಂದು ಅಧಿಸೂಚನೆ ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಸಲು ಮಾ. 30 ಕೊನೆ ದಿನ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಲೋಕಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಡಿಸಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಮಾ.31ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏ.3 ಕೊನೆಯ ದಿನ. ಏ. 17ರಂದು ಮತದಾನ ನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ ಎಂದರು.
ಸಿಬ್ಬಂದಿಗೆ ತರಬೇತಿ: ಕ್ಷೇತ್ರದಲ್ಲಿ 18,07,250 ಮತದಾರರ ಪೈಕಿ 7,925 ಸೇವಾ ಮತದಾರರಿದ್ದು, 12,290 ಅಂಗವಿಕಲ ಮತದಾರರು ಹಾಗೂ 329 ಗಣ್ಯ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 46, 247 ಯುವ ಮತದಾರರು, 80 ವರ್ಷ ಮೇಲ್ಪಟ್ಟ 41,535 ಮತದಾರರಿದ್ದಾರೆ. ಅಗತ್ಯವಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿಪ್ಯಾಟ್ ಲಭ್ಯವಿವೆ. ಈಗಾಗಲೇ ಮೊದಲ ಹಂತದ ಪರಿಶೀಲನೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್‌ಟಾವೇರ್ ಮೂಲಕ ರ‌್ಯಾಂಡ್‌ಮೈಜೇಷನ್ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ, ಚುನಾವಣೆ ವೆಚ್ಚ ಸೇರಿ ಎಲ್ಲ ತಂಡ ರಚಿಸಿ, ಅಗತ್ಯ ತರಬೇತಿ ನೀಡಲಾಗಿದೆ. ಮತಗಟ್ಟೆ ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಉಪಮತಗಟ್ಟೆ ಸ್ಥಾಪನೆ: 41,535 ಪೋಸ್ಟಲ್ ಬ್ಯಾಲೆಟ್‌ಗಳನ್ನು ಅರ್ಹ ಮತದಾರರ ಮನೆ ಮನೆಗೆ ತೆರಳಿ ನಿಗದಿತ ನಮೂನೆಯಲ್ಲಿ ನೀಡಲಾಗುತ್ತದೆ. 1 ಸಾವಿರಕ್ಕಿಂತ ಅಧಿಕ ಮತದಾರರಿರುವ ಕಡೆ ಉಪ ಮತಗಟ್ಟೆ ಸ್ಥಾಪಿಸಲಾಗಿದೆ. ಚುನಾವಣಾ ಮಾರ್ಗಸೂಚಿ ಪ್ರಕಾರ ಪೋಸ್ಟಲ್ ಬ್ಯಾಲೆಟ್‌ಗೆ ನಿಗದಿತ ನಮೂನೆ ವಿತರಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದರು.
ವ್ಯವಸ್ಥಿತ ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಪೋಲಿಂಗ್ ಸ್ಟೇಷನ್ ಬಳಿ ವ್ಯವಸ್ಥಿತ ಪೊಲೀಸ್ ಬಂದೋಬಸ್ತ್ ಜತೆಗೆ ಸೆಕ್ಟರ್ ಅಧಿಕಾರಿ ನೇಮಕ ಮಾಡಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯುವ ಕುರಿತು ಜಾಗೃತಿ ವಹಿಸಲಾಗಿದೆ. ಅಬಕಾರಿ ಇಲಾಖೆಯಿಂದ ವೈನ್‌ಶಾಪ್‌ಗಳಿಗೆ ಮಾಹಿತಿ ರವಾನಿಸಲಾಗಿದ್ದು, ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಪಂ ಸಿಇಒ ಎಚ್. ವಿ.ದರ್ಶನ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ವಿವಿಧ ಇಲಾಖೆ ಅಧಿಕಾರಿಗಳು ಇತರರಿದ್ದರು.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 27 ಚೆಕ್‌ಪೋಸ್ಟ್ ಆರಂಭಿಸಲಾಗಿದೆ. ಚುನಾವಣೆ ಅಕ್ರಮ ತಡೆಗಟ್ಟಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮಸ್ಟ್‌ರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರ ಗುರುತಿಸಲಾಗಿದೆ. ಆರ್‌ಪಿಡಿ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಸೋಂಕಿರುವ ಮತದಾರರಿಗೆ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಅಂಚೆ ಮತಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಮಾರ್ಗಸೂಚಿ ಮತ್ತು ನೀತಿ ಸಂಹಿತೆಯನ್ನು ಪರಿಗಣಿಸಿ ಹಬ್ಬ, ಜಯಂತಿ, ಸಭೆ-ಸಮಾರಂಭಗಳಿಗೆ ಅನುಮತಿ ನೀಡಲಾಗುವುದು ಎಂದು ಹಿರೇಮಠ ತಿಳಿಸಿದರು.
ಮಾ.23ರಂದು ಬೆಳಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ನಾಮಪತ್ರ ಸ್ವೀಕರಿಸಲಾಗುವುದು. ಸಾಮಾನ್ಯ ವರ್ಗದ ಅಭ್ಯರ್ಥಿಗೆ 25 ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ/ಪ.ವರ್ಗಗಳ ಅಭ್ಯರ್ಥಿಗಳಿಗೆ 12,500 ರೂ. ಠೇವಣಿ ಮೊತ್ತ ಇರುತ್ತದೆ. ಚುನಾವಣಾ ಆಯೋಗದಿಂದ ಅಭ್ಯರ್ಥಿಗಳಿಗೆ 77 ಲಕ್ಷ ರೂಪಾಯಿ ಚುನಾವಣಾ ವೆಚ್ಚದ ಮಿತಿ ನಿಗದಿಪಡಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಜತೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ಮಾದರಿ ನೀತಿಸಂಹಿತೆ ಮಾ. 16ರಿಂದಲೇ ಜಾರಿಯಲ್ಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ನೀತಿಸಂಹಿತೆ ಜಾರಿಯಲ್ಲಿರುತ್ತದೆ ಎಂದು ಎಂ.ಜಿ.ಹಿರೇಮಠ ಮಾಹಿತಿ ನೀಡಿದರು.
ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರು ಸ್ವೀಕಾರ ಕೇಂದ್ರ, ಕಂಟ್ರೋಲ್ ರೂಂ ಹಾಗೂ ಸಿವಿಜಿಲ್ ಕೇಂದ್ರ ಆರಂಭಿಸಲಾಗಿದೆ. ಚುನಾವಣಾ ಅಕ್ರಮ ಕಂಡುಬಂದರೆ ಸಾರ್ವಜನಿಕರು ಮಾದರಿ ನೀತಿ ಸಂಹಿತೆ: 0831-2406332, ದೂರು ಸ್ವೀಕಾರ ಕೇಂದ್ರ: 0831-2406325, ಸಿ-ವಿಜಿಲ್ ಕೇಂದ್ರ: 0831-2406304 ನಂಬರ್‌ಗೆ ಕರೆ ಮಾಡಿ ದೂರು ನೀಡಬಹುದು ಎಂದು ನಿಕಟಪೂರ್ವ ಚುನಾವಣಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.