

ಕಂಪ್ಲಿ: ಪಶು ವಧೆಗೆ ವೈದ್ಯಾಧಿಕಾರಿಗಳ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಕಾನೂನು ಉಲ್ಲಂಘಿಸದೇ ಬಕ್ರೀದ್ ಹಬ್ಬವನ್ನು ಸಾಮರಸ್ಯದಿಂದ ಆಚರಿಸಬೇಕು ಎಂದು ಪಿಐ ಸುರೇಶ್ ಎಚ್.ತಳವಾರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಕ್ರೀದ್ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಾಮಾಜಿಕ ಸಾಮರಸ್ಯ ಕಾಪಾಡಲು ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿದಲ್ಲಿ ಪೊಲೀಸರ ವಿರುದ್ಧ ತಪ್ಪು ತಿಳಿಯಬಾರದು. ಕಿಡಿಗೇಡಿಗಳ ಪರವಾಗಿ ಮುಖಂಡರು ರಾಜಿ ಸಂಧಾನಕ್ಕಾಗಿ ಯತ್ನಿಸಬಾರದು. ತಾಲೂಕಿನ ರೌಡಿಶೀಟರ್‌ಗಳು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದು, ಅವರಿಗೂ ಸೂಕ್ತ ತಿಳುವಳಿಕೆ ನೀಡಿದ್ದೇವೆ. ಉತ್ತಮ ನಡವಳಿಕೆ ಹೊಂದಿದವರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದರು.
ಪುರಸಭೆ ಸದಸ್ಯ ಭಟ್ಟ ಪ್ರಸಾದ್ ಮಾತನಾಡಿ, ಪ್ರತಿ ವರ್ಷದಂತೆ ಶಾಂತಿ ಸುವ್ಯವಸ್ಥೆಯಿಂದ ಬಕ್ರೀದ್ ಹಬ್ಬ ಆಚರಿಸಲಾಗುವುದು. ಅಪರಿಚಿತ, ಸಂಶಯಾತ್ಮಕ ಮತ್ತು ಕಿಡಿಗೇಡಿ ಯುವಕರ ಮೇಲೆ ಪೊಲೀಸರು ಕಣ್ಣಿಡಬೇಕು. ಶಾಂತಿಯುತ ಬಕ್ರೀದ್ ಹಬ್ಬದ ಆಚರಣೆಗೆ ಹಿಂದೂ ಸಮುದಾಯದವರು ಕೈಜೋಡಿಸಬೇಕು ಎಂದರು. ಪಿಎಸ್‌ಐ ವಿಜಯಪ್ರತಾಪ್ ಎಸ್.ಪಾಟೀಲ್, ಪ್ರಮುಖರಾದ ಎಂ.ವಲಿಅಹ್ಮದ್‌ಸಾಬ್, ಕೆ.ಮೆಹಬೂಬ್, ಬಿ.ಹುಸೇನ್‌ಸಾಬ್, ವೈ.ಅಬ್ದುಲ್ ಮುನಾಫ್, ಯು.ವಿರುಪಣ್ಣ, ಲಡ್ಡು ಹೊನ್ನೂರವಲಿ, ಇಟ್ಗಿ ಬಾಲೇಸಾಬ್, ಬಿ.ಸತ್ಯಪ್ಪ, ಬಾವಿಕಟ್ಟೆ ಬಾಬು, ಟಿ.ಜಾಫರ್, ಡಾ.ವೆಂಕಟೇಶ್, ದೇವರಮನೆ ಯಲ್ಲಪ್ಪ ಇದ್ದರು.