

ನಿಪ್ಪಾಣಿ: ಕ್ಷೇತ್ರದ ಪ್ರತಿಯೊಬ್ಬ ಯುವಕ-ಯುವತಿಯರಿಗೆ, ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಶ್ರಮಿಸಲಾಗಿದೆ. ಸರ್ಕಾರದ ಯೋಜನೆಗಳ ಮೂಲಕ ಕೈಗಾರಿಕೆ ಸ್ಥಾಪಿಸಿ ಬಹಳಷ್ಟು ಜನರಿಗೆ ಉದ್ಯೋಗ ನೀಡಲು ಒತ್ತು ನೀಡಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಇಲ್ಲಿನ ಮರಾಠ ಮಂಡಳ ಸಾಂಸ್ಕೃತಿಕ ಭವನದಲ್ಲಿ ಮಹಿಳೆಯರಿಗಾಗಿ ಜೊಲ್ಲೆ ಗ್ರೂಪ್‌ನಿಂದ ಶುಕ್ರವಾರ ಆಯೋಜಿಸಿದ್ದ ಲಘು ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೊಲ್ಲೆ ಗ್ರೂಪ್‌ನಿಂದ ಉದ್ಯೋಗಾವಕಾಶ ಕಲ್ಪಿಸಿ ಮಹಿಳೆಯರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಮಹಿಳೆಯರಿಗೆ, ಯುವತಿಯರಿಗೆ ಪ್ರೋತ್ಸಾಹಿಸುವ ಮೂಲಕ ತರಬೇತಿ ನೀಡಲಾಗುತ್ತಿದೆ. ಮಹಿಳೆ ಸ್ವಾವಲಂಬಿಯಾದಲ್ಲಿ ಕುಟುಂಬಕ್ಕೆ ಆರ್ಥಿಕ ಆಧಾರ ಸಿಗುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸಹಯೋಗದೊಂದಿಗೆ ರೈತ ಮಹಿಳೆಯರು ಲಘು ಉದ್ಯೋಗ ಕೈಗೊಂಡಿದ್ದು, ಅವರ ಉತ್ಪನ್ನ ಮಾರಾಟಕ್ಕಾಗಿ ಜೊಲ್ಲೆ ಗ್ರೂಪ್‌ನಿಂದ ಒಂದು ಸಂಚಾರಿ ವಾಹನ ಕಲ್ಪಿಸಲಾಗಿದೆ. ಅಲ್ಲದೆ ನಗರದಲ್ಲಿ ಜ್ಯೋತಿ ಬಜಾರ್ ಆರಂಭಿಸಿ ಅಲ್ಲಿ ಮಹಿಳೆಯರು ಉತ್ಪಾದಿಸುತ್ತಿರುವ ಉತ್ಪಾನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೆ ವಿದೇಶಕ್ಕೂ ರ‌್ತಾಗುವಂತೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಜೊಲ್ಲೆ ಗ್ರೂಪ್, ಶರ್ಮಾ ಇಂಡಸ್ಟ್ರೀಜ್ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 1644 ಮಹಿಳೆಯರು ಪಾಲ್ಗೊಂಡಿದ್ದರು. ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ವಿಭಾವರಿ ಖಾಂಡಕೆ, ನಗರಸಭೆ ಸದಸ್ಯ ರಾಜೇಂದ್ರ ಗುಂದೇಶಾ, ಶರ್ಮಾ ಇಂಡಸ್ಟ್ರೀಜ್‌ನ ಕೃಷ್ಣ ಶರ್ಮಾ, ಶೇಖರ ಉಪಸ್ಥಿತರಿದ್ದರು. ವಿಜಯ ರಾವುತ ನಿರೂಪಿಸಿದರು.