ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಆಗ್ರಹಿಸಿ ಸಂಡೂರಿನಲ್ಲಿ ಡಿಗ್ರಿ ಸ್ಟೂಡೆಂಟ್ಸ್ ಧರಣಿ

200220 Sanduru AIDSO Protest for Laptop
Published on

ಸಂಡೂರು: ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಬೇಕು ಎಂದು ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬುಧವಾರ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

ಎಐಡಿಎಸ್‌ಒ ತಾಲೂಕು ಸಂಚಾಲಕ ಮಂಜುನಾಥ ಮಾತನಾಡಿ, 2019-20ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿತರಿಸದಿರುವುದು ಖಂಡನೀಯ. ಕೊನೇ ವರ್ಷದ ವಿದ್ಯಾರ್ಥಿಗಳು ಪದವಿ ಮುಗಿಸಿ ಎರಡ್ಮೂರು ತಿಂಗಳಲ್ಲಿ ಹೊರ ಹೋಗುತ್ತಾರೆ. ಅವರಿಗೆ ಲ್ಯಾಪ್‌ಟಾಪ್ ನೀಡುವುದರಿಂದ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ. 2016ನೇ ಸಾಲಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ, ಈಗ ಎರಡು ವರ್ಷಗಳ ನಂತರ ರಾಜ್ಯ ಸರ್ಕಾರ ಲ್ಯಾಪ್‌ಟಾಪ್ ವಿತರಣೆ ಬಗ್ಗೆ ಪ್ರಸ್ತಾಪ ಮಾಡಿ ಭರವಸೆ ನೀಡಿದೆ. ಹಾಗಾದರೆ, ಕಳೆದ ಎರಡು ವರ್ಷಗಳಿಂದ ಉಚಿತ ಲ್ಯಾಪ್‌ಟಾಪ್ ವಿತರಣೆಗಾಗಿ ಮೀಸಲಿಟ್ಟ ಹಣ ಏನಾಯಿತು ಎಂಬುದನ್ನು ಬಹಿರಂಗಪಡಿಸಬೇಕು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಎಚ್.ಜೆ.ರಶ್ಮಿಗೆ ಮನವಿ ಸಲ್ಲಿಸಲಾಯಿತು. ಮಮತಾ, ಅಂಜಲಿ, ಭವಾನಿ, ಗೀತಾ, ಸಮೀರಾ, ರಂಜುಶ್ರೀ, ಲಕ್ಷ್ಮಿ, ವಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net