

ಮಡಿಕೇರಿ ಮಾ.೨೦ : ಯಾವುದೇ ಕ್ಷೇತ್ರದ ಸಾಧನೆಗೆ ವಿದ್ಯೆ ಮತ್ತು ಹಣವಿದ್ದರೆ ಸಾಲದು, ಸಾಧಿಸುವ ಮನಸ್ಸಿರಬೇಕು. ಸಾಹಿತ್ಯ ಕೃಷಿ ಎನ್ನುವುದು ಒಂದು ತಪಸ್ಸು ಇದ್ದಂತೆ ಎಂದು ೨೦೨೪ರ ಕುಂಡ್ಯೋಳಂಡ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ ೮೭ನೇ ಪುಸ್ತಕ ಹಾಗೂ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣರವರು ರಚಿಸಿರುವ ೭ನೇ ಕೊಡವ ಪುಸ್ತಕ ಕೂಪದಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದ್ದು, ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದೆ. ಸಾಹಿತಿಯ ಮನಸ್ಸಿನಿಂದ ಬರಹದ ರೂಪದಲ್ಲಿ ಹೊರ ಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು. ಕಣ್ಣು, ಕಿವಿ ಮತ್ತು ಹೃದಯಕ್ಕೆ ಕೆಲಸ ಕೊಡಬೇಕು. ಸಾಹಿತಿಗಳು ಯಾವುದೇ ಸಭೆ, ಸಮಾರಂಭ ಮತ್ತಿತರ ಪ್ರದೇಶಗಳಿಗೆ ತೆರಳಿದರೂ ಬರವಣಿಗೆಯ ಮೂಲಕ ತಮ್ಮ ಅನುಭವವನ್ನು ಓದುಗರಿಗೆ ಹಂಚಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅನುಭವಕ್ಕೆ ಬರವಣಿಗೆಯ ರೂಪ ನೀಡಿ ಓದುಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಕಷ್ಟದ ಕಾಯಕ ಮಾಡುವ ಬರಹಗಾರರಿಗೆ ದಾನಿಗಳ ಸಹಕಾರದ ಅಗತ್ಯವಿದೆ ಎಂದರು.
ಕೊಡವ ಮಕ್ಕಡ ಕೂಟದ ವತಿಯಿಂದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸಾಕಷ್ಟು ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಕೊಡಗಿನ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಹೊರತರುವಂತಾಗಲಿ ಎಂದು ರಮೇಶ್ ಮುದ್ದಯ್ಯ ಶುಭ ಹಾರೈಸಿದರು.
ಕೂಪದಿ ಪುಸ್ತಕದ ಬರಹಗಾರರಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ಕೂಪದಿ ನನ್ನ ಕನಸಿನ ೭ನೇ ಪುಸ್ತಕವಾಗಿದ್ದು, ಸಣ್ಣ ಕಥೆಗಳ ಸಂಗ್ರಹವಾಗಿದೆ. ಜೀವ, ಜೀವನ, ಕಣ್ಣಿಗೆ ಕಾಣುವ ಸಹಜತೆ ಇದರಲ್ಲಿದೆ. ಬರಹಗಾರರಿಗೆ ದಾನಿಗಳ ಸಹಕಾರದ ಅಗತ್ಯವಿದೆ. ಪುಸ್ತಕಗಳನ್ನು ಓದಿ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಮಾತ್ರ ಸಾಹಿತಿಗಳಿಗೆ ಮತ್ತಷ್ಟು ಪುಸ್ತಕಗಳ ರಚನೆಗೆ ಸ್ಫೂರ್ತಿ ದೊರೆಯುತ್ತದೆ ಎಂದರು.
ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಕೊಡವ ಸಂಘಟನೆ ಮತ್ತು ಕೊಡವ ಸಮಾಜಗಳು ಮಾಡಬೇಕಾದ ಕಾರ್ಯಕ್ರಮಗಳನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ. ನಾಲ್ಕು ಸಾವಿರ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುವ ಮೂಲಕ ಕೊಡವ ಸಾಹಿತ್ಯ, ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಉಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಹೊಸ ಹೊಸ ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಮೂಲಕ ಅವರನ್ನು ಪ್ರೇರಿಸಲಾಗುತ್ತಿದೆ ಎಂದು ತಿಳಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ವತಿಯಿಂದ ದಾನಿಗಳ ಸಹಕಾರದಿಂದ ಈಗಾಗಲೇ ೮೭ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದ್ದು, ೧೩ ಪುಸ್ತಕಗಳು ಪುಸ್ತಕಗಳು ತಯಾರಿ ಹಂತದಲ್ಲಿದೆ. ಆ ಮೂಲಕ ಒಟ್ಟು ೧೦೦ ಪುಸ್ತಕಗಳನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಯೋಧರ ಬಗ್ಗೆ ಮಾಹಿತಿ ಇರುವ ಪುಸ್ತಕಗಳನ್ನು ಹೊರತರುವ ಅಗತ್ಯತೆ ಇದ್ದು, ಸಂಶೋಧನ ಕೃತಿಗಳನ್ನು ರಚಿಸಲು ಕೊಡಗಿನಲ್ಲಿ ಹಲವು ಅವಕಾಶಗಳಿದೆ. ಸಂಶೋಧಕರು ಮುಂದೆ ಬರಬೇಕು. ಯುವ ಪೀಳಿಗೆಗೆ ಹೊಸ ಸಂಶೋಧನ ಕೃತಿಗಳು ಬರಬೇಕು. ಸಾಹಿತ್ಯದ ಬಗ್ಗೆ ಯುವಕ, ಯುವತಿಯರಿಗೆ ಆಸಕ್ತಿ ಬರಬೇಕು. ಪುಸ್ತಕ ಓದುಲು ಯುವಕರನ್ನು ಪ್ರೇರಣೆಗೊಳಿಸಬೇಕು. ಈ ನಿಟ್ಟಿನಲ್ಲಿ ಕೊಡವ ಮಕ್ಕಡ ಕೂಟ ಕನ್ನಡ, ಇಂಗ್ಲಿಷ್ ಹಾಗೂ ಕೊಡವ ಭಾಷೆಯ ಪುಸ್ತಕಗಳಿಗೆ ಒತ್ತು ನೀಡುವ ಮೂಲಕ ಕೊಡಗು, ಕೊಡವ ಭಾಷೆಯನ್ನು ಲೋಕಕ್ಕೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಚೀಯಕಪೂವಂಡ ಸಚಿನ್ ಪೂವಯ್ಯ, ಪೊನ್ನಚೆಟ್ಟಿರ ಪ್ರದೀಪ್ ಉಪಸ್ಥಿತರಿದ್ದರು.