ಮೀಸಲಾತಿ ನೀಡಲು ಸಿಎಂಗೆ ಶಕ್ತಿ ನೀಡಲಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಾರ್ಥನೆ, ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ

IMG_20231013_142448_714-1.jpg
Published on

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸಲು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಗಮನ ಸೆಳೆದರು.

ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಗಬ್ಬೂರ ಬಳಿ ಜಮಾಯಿಸಿದ ಸಮಾಜದ ಜನರು ವಿಭಿನ್ನವಾಗಿ ಹೋರಾಟ ನಡೆಸಿದರು. ಮೀಸಲಾತಿ ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು. ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಕುಳಿತು ಲಿಂಗ ಪೂಜೆ ನೆರವೇರಿಸಿದ ಸ್ವಾಮೀಜಿ, ಮೀಸಲಾತಿ ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ದೇವರು ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.

ಇದೇ ರೀತಿ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಗಮನ ಹರಿಸಬೇಕೆಂದು ಬೇಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಕಳೆದ ಮೂರು ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ನಡೆಸಲಾಗುತ್ತಿದೆ. ಕಳೆದ ಬಾರಿ ಬಿಜೆಪಿ ಸರ್ಕಾರ ಬಹಳಷ್ಟು ಸತಾಯಿಸಿದ ನಂತರ ಘೋಷಣೆ ಮಾಡಿತು. ಅದು ಜಾರಿಗೆ ಬರಲಿಲ್ಲ. ಹಾಗಾಗಿ ಈಗಿನ ಕಾಂಗ್ರೆಸ್ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. 30 ಜಿಲ್ಲೆಯಲ್ಲಿ ಸಮಾವೇಶ ಮಾಡಲಾಗುತ್ತಿದ್ದು, ಅಷ್ಟರೊಳಗೆ ಬೇಡಿಕೆ ಈಡೇರಿಸಬೇಕು. ಪ್ರಾಣ ಹೋದರೂ ಸರಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಗುಡುಗಿದರು.

ಸರ್ಕಾರದಲ್ಲಿ ಸಮಾಜದವರಿಗೆ ಅಧಿಕಾರ ಕೊಟ್ಟರೆ ಸಾಲದು. ಜನರ ಅನುಕೂಲಕ್ಕಾಗಿ ಮೀಸಲಾತಿ ನೀಡಿದರೆ ಮಾತ್ರ ನಾವು ಸಂತೃಪ್ತರಾಗುತ್ತೇವೆ. ಇಲ್ಲದೇ ಹೋದರೆ ಸುವರ್ಣ ಸೌಧ ಎದುರು ಇಷ್ಟಲಿಂಗ ಪೂಜೆ ಮಾಡುತ್ತೇವೆ ಎಂದರು.

ಮೂಗಿಗೆ ತುಪ್ಪ ಸವರಬೇಡಿ: ಇದುವರೆಗೂ ಸರ್ಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ. ಮತ್ತೆ ಇಂತಹ ಪ್ರಯತ್ನವನ್ನು ಸರ್ಕಾರ ಮಾಡಬಾರದು. ನಾವು ಹೋರಾಟಕ್ಕೆ ಸೀಮಿತವಾಗಿಲ್ಲ. ಲೋಕಸಭಾ ಚುನಾವಣೆ ಒಳಗಾಗಿ ನ್ಯಾಯ ಸಿಗಬೇಕು. ನಮಗೆ ಅಧಿಕಾರಕ್ಕೆ ತರುವುದು ಗೊತ್ತು, ರ್ಕುಚಿಯಿಂದ ಕೆಳಗಿಳಿಸುವುದೂ ಗೊತ್ತು ಎಂದು ರಾಜ್ಯ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಲಾಡ್ ಭರವಸೆ: ಸ್ವಾಮೀಜಿ ಮಾತನಾಡುತ್ತಿದ್ದಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸ್ವಾಮೀಜಿಗೆ ಕರೆ ಮಾಡಿದರು. ನಿಮ್ಮ ಹೋರಾಟಕ್ಕೆ ನಮ್ಮ ಸಹಕಾರ ಇದೆ. ಮಿಸಲಾತಿ ಕುರಿತು ಸಿಎಂ ಗಮನಕ್ಕೆ ತರುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಮಾತನಾಡಿ, ಮೀಸಲಾತಿಗಾಗಿ ಈ ಹಿಂದೆ ಹಲವು ಹೋರಾಟಗಳು ಆಗಿವೆ. ಸಂಘಟನೆ ಇನ್ನಷ್ಟು ಚುರುಕಾಗಬೇಕು. ಶಾಸಕರಾದ ಜಗದೀಶ ಶೆಟ್ಟರ, ಪ್ರಸಾದ ಅಬ್ಬಯ್ಯ ಅವರ ಮನೆ ಮುಂದೆ ಧರಣಿ ಮಾಡೋಣ, ಸಿದ್ದರಾಮಯ್ಯ ಅವರ ಮನೆಗೂ ಹೋಗುತ್ತೇನೆ. ಪಟ್ಟು ಹಿಡಿದು ಕುಳಿತುಕೊಳ್ಳಲು ಸಿದ್ಧನಿದ್ದೇನೆ. ಸಮಾಜದ ಜನರು ಒಗ್ಗಟ್ಟಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಎನ್ಜಿಇಎ್ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ, ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯೆ ದೀಪಾ ಗೌರಿ, ಕಾಂಗ್ರೆಸ್ ವಕ್ತಾರ ಗಂಗಾಧರ ದೊಡ್ಡವಾಡ, ಜಿ.ಜಿ. ದ್ಯಾವನಗೌಡ್ರ, ರಾಜಶೇಖರ ಮೆಣಸಿನಕಾಯಿ, ಸದಾನಂದ ಡಂಗನವರ, ನಂದಕುಮಾರ ಪಾಟೀಲ, ವಿರೇಶ ಉಂಡಿ, ಬಾಪುಗೌಡ ಪಾಟೀಲ, ವಿರುಪಾಕ್ಷಪ್ಪ ಕಳ್ಳಿಮನಿ, ಈಶ್ವರ ಶಿರಸಂಗಿ, ಕುಮಾರ ಕುಂದನಳ್ಳಿ, ಕುಮಾರಗೌಡ ಪಾಟೀಲ, ರವಿರಾಜ ಕೊಡ್ಲಿ, ಮಹಾಂತೇಶ ಪಾಟೀಲ, ಶಶಿ ಡಂಗನವರ, ಮುಂತಾದವರು ಉಪಸ್ಥಿತರಿದ್ದರು.

ಇಷ್ಟಲಿಂಗ ಪೂಜೆ: ಸಮಾಜದ ಜನರು ಕೈಯಲ್ಲಿ ಲಿಂಗವನ್ನು ಇಟ್ಟುಕೊಂಡು ಪೂಜೆ ಮಾಡಿದರು. ಸ್ವಾಮೀಜಿ ಸೂಚನೆಯಂತೆ ಪೂಜೆ ನೆರವೇರಿಸಿದರು. ಜಯ ಗುರು ಬಸವ… ಎಂದು ಜಯಘೋಷ ಮೊಳಗಿಸಿದರು.

ಮೆರವಣಿಗೆ: ಇದಕ್ಕೂ ಮೊದಲು ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನ ಮೂತಿರ್ಗೆ ಮಾಲಾರ್ಪಣೆ ಮಾಡಿದ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ನಂತರ ಸಂಗೊಳ್ಳಿ ರಾಯಣ್ಣನ ಮೂತಿರ್ಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಲಾಯಿತು. ಬಂಕಾಪುರ ಚೌಕ್ ವರೆಗೆ ಬೈಕ್ ರ್ಯಾಲಿ ನಡೆಯಿತು. ಗಬ್ಬೂರ ಬಳಿ ಹೆದ್ದಾರಿಯಲ್ಲಿ ಜಮಾಯಿಸಿ ಇಷ್ಟಲಿಂಗ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net