ಇತ್ಯರ್ಥವಾಗದ ನಿವೇಶನ ಹಂಚಿಕೆ ಸಮಸ್ಯೆ

jlr
Published on

ಲೋಕೇಶ್ ಎಂ. ಐಹೊಳೆ ಜಗಳೂರು

ಆಶ್ರಯ ಯೋಜನೆಯ ಫಲಾನುಭವಿಗಳ ಸ್ವಂತ ಸೂರಿನ ಕನಸು ನನಸಾಗಿಯೇ ಉಳಿದಿದ್ದು, 16 ವರ್ಷಗಳಿಂದ ನಿವೇಶನ ಹಂಚಿಕೆಯಾಗದೆ, ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಪಪಂ ಅಧಿಕಾರಿಗಳ ನಿರೀಕ್ಷೆಯಲ್ಲಿ ಕಾಲ ದೂಡುವಂತಾಗಿದೆ.

ಕೊಳಚೆ ಪ್ರದೇಶ, ಮಂಜುನಾಥ ಬಡಾವಣೆ, ಅಶ್ವತ್ಥ ಬಡಾವಣೆ, ಅಶ್ವತ್ಥ ರೆಡ್ಡಿ ನಗರ ಸೇರಿ ಹಲವು ವಾರ್ಡ್‌ಗಳಲ್ಲಿ ಜೀವನ ನಡೆಸುತ್ತಿರುವ ಬಹುತೇಕರು ರೈತ, ಕಟ್ಟಡ ಕೂಲಿ ಕಾರ್ಮಿಕರೆ. ಕೆಲವೇ ಕೆಲವರು ಸ್ವಂತ ಮನೆ ಹೊಂದಿದ್ದು, ಶೇ. 30ರಷ್ಟು ಜನರು ಬಾಡಿಗೆ, ಮುರಿದ ಹಂಚಿನ ಮನೆ, ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ.

ಪ್ರತಿ ದಿನ ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆಯಬೇಕು. ಒಂದು ದಿನ ಮನೆಯಲ್ಲಿದ್ದರೆ ಬದುಕು ನಡೆಸುವುದು ತುಂಬ ಕಷ್ಟವಾಗುತ್ತದೆ. ಇಂಥವರಿಗೆ ಸಾಧ್ಯವಾದಷ್ಟು ನಿವೇಶನ ಹಂಚಿಕೆ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಪಪಂ ಮುಂದಾಗಬೇಕಿದೆ ಎನ್ನುತ್ತಾರೆ ಹೋರಾಟಗಾರ ಪ್ರಹ್ಲಾದ್ ರೆಡ್ಡಿ.

1993-94ನೇ ಸಾಲಿನಲ್ಲಿ ಪಟ್ಟಣದ ಸ.ನಂ. 99ರಲ್ಲಿ ಆಶ್ರಯ ಯೋಜನೆಯಡಿ ನಿವೇಶನ ರಹಿತ ಸುಮಾರು 700 ಫಲಾನುಭವಿ ಗುರುತಿಸಿದ ಪಪಂ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ವಿತರಿಸಿರುವುದು ಇಲ್ಲಿ ಸ್ಮರಿಸಬಹುದು. ಆದರೆ, ಹದಿನಾರು ವರ್ಷಗಳಾದರೂ ಇನ್ನು ನಿವೇಶನವಿಲ್ಲದೇ ಫಲಾನುಭವಿಗಳು ನಿರಂತರ ಹೋರಾಟ, ಪ್ರತಿಭಟನೆ, ಧರಣಿ ನಡೆಸಿದರೂ ಪ್ರಯೋಜನವಾಗಿಲ್ಲ.

ನಿವೇಶನ ಮಂಜೂರಾತಿ ಹಕ್ಕುಪತ್ರ ನೀಡಿದ್ದರಿಂದ ಪಟ್ಟಣದ ಹೊರವಲಯದ ಈಗಿನ ತಾಲೂಕು ಕ್ರೀಡಾಂಗಣ ಮತ್ತು ಸುತ್ತಲಿನ ಜಾಗದಲ್ಲಿ ಫಲಾನುಭವಿಗಳು ಗುಡಿಸಲು ಹಾಕಿಕೊಂಡಿದ್ದರು. ಆದರೆ, ಅಂದಿನ ಶಾಸಕರಾಗಿದ್ದ ಟಿ.ಗುರುಸಿದ್ದನಗೌಡರು ಪಟ್ಟಣದ ಸಮೀಪ ಜಾಗ ನೀಡುವುದಾಗಿ ಫಲಾನುಭವಿಗಳಿಗೆ ಭರವಸೆ ನೀಡಿ ಗುಡಿಸಲು ತೆರವುಗೊಳಿಸಿ ಸ.ನಂ 99ರಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಿದರು. ದುರದೃಷ್ಟವೆಂದರೆ ಕ್ಷೇತ್ರ ಎಸ್ಟಿ ಮೀಸಲು ಜಾರಿಯಿಂದ ಗುರುಸಿದ್ದನಗೌಡರು ಕೆಲವೇ ತಿಂಗಳಲ್ಲಿ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಯಿತು. ಆದರೆ, ಫಲಾನುಭವಿಗಳು ನಿವೇಶನ ಹಂಚಿಕೆ ಹಾಗೆಯೇ ಉಳಿಯಿತು. ತದ ನಂತರ ಆಯ್ಕೆಯಾದ ಶಾಸಕರು ಬಡ ಫಲಾನುಭವಿಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ.

ಸ.ನಂ 99ರ ಗೋಮಾಳದಲ್ಲಿ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ರಾಜಕಾರಣಿಗಳು ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಬಡವರ ನಿವೇಶನಗಳಲ್ಲಿ ಕ್ರೀಡಾಂಗಣ, ಡಿಪ್ಲೊಮಾ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು ನಿರ್ಮಿಸಿ ಸ್ಥಳವಿಲ್ಲದಂತೆ ಮಾಡಿದ್ದಾರೆ. ಇದರಿಂದ ನೂರಾರು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ.

-ರಾಜು, ಹೋರಾಟಗಾರ

- ಪಟ್ಟಣದಲ್ಲಿ ಸಾವಿರಾರು ಜನರಿಗೆ ನಿವೇಶವಿಲ್ಲ. ಆದ್ದರಿಂದ, ಹೊರವಲಯದಲ್ಲಿ 20 ಎಕರೆ ಜಮೀನು ಖರೀದಿಸಿ ನಿವೇಶನ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆಯಾದರೆ ಎಲ್ಲರಿಗೂ ನಿವೇಶನ ಸಿಗುವ ವಿಶ್ವಾಸವಿದೆ.

- ಲೋಕ್ಯಾನಾಯ್ಕ, ಮುಖ್ಯಾಧಿಕಾರಿ, ಪಪಂ, ಜಗಳೂರು

- ಕ್ಷೇತ್ರದ ಮತದಾರರಿಗೆ ಸೂರು- ನೀರು ಕೊಡುವುದು ನನ್ನ ಮೊದಲ ಗುರಿ, ಪಟ್ಟಣದ ನಿವಾಸಿಗಳಿಗೆ ತೊಂದರೆಯಾಗದಂತೆ ಕಡು ಬಡವರನ್ನು ಗುರುತಿಸಿ ನಿವೇಶನ ನೀಡಲು ಉದ್ದೇಶಿಸಲಾಗಿದೆ. ಪಟ್ಟಣದ ಸುತ್ತಮುತ್ತಲಿನ ರೈತರು ಜಮೀನು ಮಾರಾಟ ಮಾಡಲು ಮುಂದೆ ಬಂದರೆ ಪಪಂನಿಂದ ಖರೀದಿಸಿ ನಿವೇಶನ ಹಂಚಿಕೆ ಮಾಡಲಾಗುವುದು.

- ಎಸ್.ವಿ.ರಾಮಚಂದ್ರ, ಶಾಸಕ, ಅಧ್ಯಕ್ಷರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಡಗಳ ಅಭಿವೃದ್ಧಿ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net