

ಬೆಂಗಳೂರು: ಕಿಡ್ನಿ ಮಾರಾಟ ಮತ್ತು ಖರೀದಿ ನೆಪದಲ್ಲಿ ಅಮಾಯಕರಿಂದ ಲಕ್ಷಾಂತರ ರೂ. ಲಪಟಾಯಿಸಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳ ಗಾಗಿದ್ದ ಕ್ಯಾಮರೂನ್ ದೇಶದ ಪ್ರಜೆ ಬ್ವೇರ್ಕಾ ಜಾಫ್ ಡೆಕ್ಲೆನ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ದಾಸನಪುರದ ನಿವಾಸಿ ಪ್ರದೀಪ್ ಕುಮಾರ್ (26) ವಂಚನೆಗೊಳಗಾದವರು. ಕಳೆದ ನ.19ರಂದು ಪ್ರದೀಪ್ ಜಾಲತಾಣಗಳಲ್ಲಿ ಕಿಡ್ನಿ ಮಾರಾಟ ಮಾಡುವ ಬಗ್ಗೆ ಮಾಹಿತಿ ಹುಡುಕುತ್ತಿದ್ದಾಗ ‘ಸೇಲ್ಕಿಡ್ನಿ ಡಾಟ್ ಸೈಟ್’ ವೆಬ್ಸೈಟ್ನಲ್ಲಿ ಕಿಡ್ನಿ ಮಾರಾಟದ ಕುರಿತು ಇದ್ದ ಜಾಹೀರಾತು ಗಮನಿಸಿದ್ದರು. ಅದರಲ್ಲಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಆರೋಪಿ ಬ್ವೇರ್ಕಾ, ತನ್ನನ್ನು ಡಾ. ಗೋಕುಲ ಕೃಷ್ಣ ಎಂದು ಪರಿಚಯಿಸಿಕೊಂಡಿದ್ದ. ಬಾಣಸವಾಡಿಯ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಯೂರಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದ. ಅದನ್ನು ನಂಬಿದ ಪ್ರದೀಪ್ ತಾವು ಕಿಡ್ನಿ ಮಾರಲು ಸಿದ್ಧರಿರುವುದಾಗಿ ತಿಳಿಸಿದ್ದರು. ಒಂದು ಕಿಡ್ನಿಗೆ 2.5 ಕೋಟಿ ರೂ. ನೀಡಲಾಗುತ್ತದೆ ಎಂದು ನಂಬಿಸಿದ ಆರೋಪಿ, ಪ್ರದೀಪ್ ಬ್ಲಡ್ ಗ್ರೂಪ್, ವಯಸ್ಸು ಸೇರಿ ಇತರ ದಾಖಲೆ ನೀಡುವಂತೆ ಸೂಚಿಸಿದ್ದ. ನೀವು ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಅಡ್ವಾನ್ಸ್ ರೂಪದಲ್ಲಿ 1.5 ಕೋಟಿ ರೂ.ಗಳನ್ನು ಮುಂಗಡವಾಗಿ ನೀಡುತ್ತೇನೆ. ಬಾಕಿ 1 ಕೋಟಿ ರೂ.ಗಳನ್ನು ಕಿಡ್ನಿ ಮಾರಾಟ ಮಾಡಿದ ಬಳಿಕ ಕೊಡಲಾಗುತ್ತದೆ ಎಂದು ಆಮಿಷವೊಡ್ಡಿದ್ದ.
ನೋಂದಣಿ ಶುಲ್ಕ 8,500 ರೂ., ಇನ್ಸೂರೆನ್ಸ್ ಶುಲ್ಕ 18.200 ರೂ., ಜಿಎಸ್ಟಿ 32,500 ರೂ., ಆಸ್ಪತ್ರೆಯ ಪ್ರೊಸೆಸಿಂಗ್ ಶುಲ್ಕ 48,000 ರೂ.ಗಳನ್ನು ಮುಂಗಡವಾಗಿ ಪಾವತಿಸಬೇಕಾಗುತ್ತದೆ ಎಂದು ಆರೋಪಿ ಬ್ವೇರ್ಕಾ ಹೇಳಿದ್ದ. ಆತನ ಮಾತಿಗೆ ಮರುಳಾದ ಪ್ರದೀಪ್ 2.5 ಕೋಟಿ ರೂ. ಸಿಗುತ್ತದೆ ಎಂಬ ಆಸೆಯಿಂದ ಆರೋಪಿ ಹೇಳಿದ ಬ್ಯಾಂಕ್ ಖಾತೆಗೆ ಹಂತಹಂತವಾಗಿ ಒಟ್ಟು 1.7 ಲಕ್ಷ ರೂ. ಜಮೆ ಮಾಡಿದ್ದರು.
ಆರೋಪಿ ಬ್ವೇರ್ಕಾ ಇನ್ನೂ ಹೆಚ್ಚಿನ ಹಣವನ್ನು ಖಾತೆಗೆ ಜಮೆ ಮಾಡುವಂತೆ ಸೂಚಿಸಿದಾಗ ಪ್ರದೀಪ್ಗೆ ಅನುಮಾನ ಬಂದಿತ್ತು. ಈ ಅನುಮಾನದ ಮೇರೆಗೆ ವೈಟ್ಫೀಲ್ಡ್ನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಹೋದ ಪ್ರದೀಪ್, ಅಲ್ಲಿ ಡಾ.ಗೋಕುಲ್ಕೃಷ್ಣ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ, ತನ್ನ ಹೆಸರಿನಲ್ಲಿ ಯಾರೋ ಅಪರಿಚಿತರು ಸುಳ್ಳು ಮಾಹಿತಿ ನೀಡಿ ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಆಗ ಆರೋಪಿಯ ಅಸಲಿಯತ್ತು ಬೆಳಕಿಗೆ ಬಂದಿದೆ. ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ಇನ್ನೂ ಹಲವು ಜನರಿಗೆ ಇದೇ ರೀತಿ ವಂಚಿಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.