

ಉಡುಪಿ: ದೇಶದಾದ್ಯಂತ ಹಳೆಯ ಪಾದರಕ್ಷೆಗಳನ್ನು ಪಡೆದು, ಅದನ್ನು ಮರುಬಳಕೆ ಮಾಡಿ, ಹೊಸ ಪಾದರಕ್ಷೆಯನ್ನು ತಯಾರಿಸಿ ಬಡ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದು, ಈಗಾಗಲೇ ಭಾರತದಾದ್ಯಂತ ೬.೭ ಲಕ್ಷ ಚಪ್ಪಲಿ ನೀಡಲಾಗಿದೆ. ಈ ವರ್ಷ ಸಾವಿರಾರು ಮಂದಿಗೆ ಚಪ್ಪಲಿ ಕೊಡಲಾಗಿದ್ದು, ಒಟ್ಟು ೮ ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಮುಂಬಯಿಯ ಗ್ರೀನ್ ಸೋಲ್ ಸಂಸ್ಥೆಯ ಸಹಸಂಸ್ಥಾಪಕ ರಮೇಶ್ ಧಾಮಿ ಹೇಳಿದರು.
ಸೋಮವಾರ ಬಡಗಬೆಟ್ಟು ಸೊಸೈಟಿ ಸಭಾಂಗಣದಲ್ಲಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಮತ್ರೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಪಂಚದಲ್ಲಿ ಪ್ರತೀ ವರ್ಷ ೩೫ ಕೋಟಿ ಪಾದರಕ್ಷೆಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ೧ ಕೆಜಿ ಹಳೆಯ ಚಪ್ಪಲಿಗಳಿಂದ ೨.೫ ಗ್ರಾಂನಷ್ಟು ಕಾರ್ಬನ್ ಉತ್ಪನ್ನವಾಗುತ್ತದೆ. ೧.೮ ಬಿಲಿಯನ್ ಜನರಿಗೆ ಚಪ್ಪಲಿಗಳೇ ಇರುವುದಿಲ್ಲ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಜಗತ್ತಿನ ಏಕೈಕ ಸಂಸ್ಥೆ ನಮ್ಮದಾಗಿದೆ ಎಂದು ತಿಳಿಸಿದರು.
ಮ್ಯಾರಥಾನ್ ಚಪ್ಪಲಿ ರಿಪೇರಿ
ಮುಂಬೈನಲ್ಲಿ ೧೦ ವರ್ಷದ ಕೆಳಗೆ ನಾನು ಮ್ಯಾರಥಾನ್ ಓಟಗಳಲ್ಲಿ ಭಾಗಿಯಾಗುತ್ತಿದ್ದು, ಇದಕ್ಕಾಗಿ ವಿದೇಶದಿಂದ ದುಬಾರಿ ಶೂ ತರಿಸಿಕೊಂಡಿದ್ದೆ. ಇದು ಹಾಳಾದ ಸಂದರ್ಭದಲ್ಲಿ ಸ್ವಲ್ಪ ರಿಪೇರಿ ಮಾಡಿ ಬಳಸಿಕೊಳ್ಳಲು ಪ್ರಾರಂಭಿಸಿದೆ. ನಂತರ ಹೀಗೆ ಹಳೆ ಶೂಗಳನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಹೊಸ ತಂತ್ರಜ್ಞಾನ ಕಲಿಯಲು ೫೦೦ ರಿಂದ ೬೦೦ ಕಂಪೆನಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ೨೦೧೩ರಲ್ಲಿ ರಾಮ್ ಕಂಪೆನಿ ಈ ಅವಕಾಶ ನೀಡಿತು. ಇಲ್ಲಿ ಹಳೆ ಪಾದರಕ್ಷೆಗಳನ್ನು ಮರುವಿನ್ಯಾಸ ಮಾಡಲಾಗುತ್ತಿದ್ದು, ವಿಶ್ವದಲ್ಲಿ ಯಾವುದೇ ಕಂಪೆನಿಗಳು ಈ ಕೆಲಸದಲ್ಲಿ ತೊಡಗಿಲ್ಲ. ಉಚಿತವಾಗಿ ಲಭ್ಯವಾದ ಚಪ್ಪಲಿಗಳನ್ನು ಬಡವರಿಗೆ ಉಚಿತವಾಗಿ ನೀಡಲು ನಿರ್ಧರಿಸಿದ್ದು, ಈ ಕಾರ್ಯಕ್ಕೆ ಅನೇಕ ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರಿಂದ ಬೆಂಬಲ ವ್ಯಕ್ತವಾಗಿದೆ. ಇತ್ತೀಚೆಗೆ ಕಬ್ಬಿನ ಜೊಳ್ಳು ಹಾಗೂ ತರಕಾರಿ ತ್ಯಾಜ್ಯಗಳನ್ನು ಬಳಸಿಕೊಂಡು ವೇಗನ್ ಫೂಟ್ ವೇರ್ ಯೋಜನೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಉದ್ಯಮಿ ಪ್ರಶಾಂತ್ ಕುಂದರ್, ಉಡುಪಿ ವಿಶ್ವನಾಥ ಶೆಣೈ, ಗಣೇಶ್ ನಾಯಕ್ ಶಿರಿಯಾರ, ತ್ರಿಶಾ ಸಂಸ್ಥೆ ಮುಖ್ಯಸ್ಥ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿ, ನಮ್ರತಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಅವಿನಾಶ್ ಕಾಮತ್ ಸಂವಾದ ನಿರ್ವಹಿಸಿದರು. ಜನಾರ್ದನ ಕೊಡವೂರು ವಂದಿಸಿದರು.