

ವಿಜಯವಾಣಿ ಸುದ್ದಿಜಾಲ ಉಡುಪಿ
ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ವಕೀಲರೊಬ್ಬರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದಿರುವುದನ್ನು ಉಡುಪಿ ವಕೀಲರ ಸಂಘ (ರಿ.) ತೀವ್ರವಾಗಿ ಖಂಡಿಸಿದೆ.
ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯು ತುರ್ತು ಸಭೆ ನಡೆಸಿ, ಅ.6ರಂದು ನಡೆದ ಘಟನೆಯು ನ್ಯಾಯಾಂಗದ ಘನತೆಗೆ ಧಕ್ಕೆ ತಂದಿದೆ ಎಂದು ಖಂಡಿಸಿ, ದುಷ್ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಿತ್ರಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆರ್., ಖಜಾಂಚಿ ಗಂಗಾಧರ ಎಚ್.ಎಂ., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ ಮೂಡುಬೆಳ್ಳೆ ಹಾಗೂ ಕಾರ್ಯಕಾರಿ ಸಮಿತಿಯ ಸಕಲ ಸದಸ್ಯರು ಪಾಲ್ಗೊಂಡಿದ್ದರು.
ಕಠಿಣ ಶಿಕ್ಷೆ ಆಗಲೇಬೇಕುಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ಆ ಘಟನೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ. ಸಂವಿಧಾನ ಓದಿದ, ಪ್ರಜಾಸತ್ತೆಯನ್ನು ಎತ್ತಿ ಹಿಡಿಯಬೇಕಿದ್ದ ಹಿರಿಯ ವಕೀಲರೊಬ್ಬರು ನ್ಯಾಯಪೀಠದ ಕಡೆಗೆ ಪಾದರಕ್ಷೆ ಎಸೆದೂ ಅದನ್ನು ಸಮರ್ಥಿಸಿಕೊಳ್ಳುತ್ತಾರೆಂದರೆ ಅವರದು ಎಂತಹ ಕ್ರಿಮಿನಲ್ ಮನಸ್ಥಿತಿ ಇರಬೇಕು? ಅರಿವಿದ್ದೂ ದುಷತ್ಯ ಎಸಗಿದ್ದಕ್ಕೆ ಕಠಿಣ ಶಿಕ್ಷೆ ಆಗಲೇಬೇಕು. ಸಂವಿಧಾನ ಗೌರವವಿಸುವ ಪ್ರತಿ ನಾಗರಿಕನೂ ಖಂಡಿಸಬೇಕು. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.