ಮಹಾಪುರುಷರ ನಡೆಯಲ್ಲಿ ಧರ್ಮದ ಹೆಜ್ಜೆ ಗುರುತುಗಳು, ರಾಘವೇಶ್ವರ ಶ್ರೀಗಳ ವಿವರಣೆ

22gkn1- sri anavarana
Published on

ಗೋಕರ್ಣ: ಯಾವ ಮಾರ್ಗದಲ್ಲಿ ಸಾಗಿದರೆ ನಿಜವಾದ ಮತ್ತು ಯುಕ್ತವಾದ ಧರ್ಮತತ್ವದ ಅರಿವು ಲಭಿಸುತ್ತದೆ ಎನ್ನುವ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ, ಅನಿಶ್ಚಿತತೆ ಯಾವತ್ತೂ ಕಾಣ ಸಿಗುತ್ತದೆ. ಈ ದ್ವಂದ್ವ ನಿವೃತ್ತಿಗೆ ಮಹಾಪುರುಷರು ಸಾಗಿದ ದಾರಿಯ ಅನುಸರಣೆಯೊಂದೇ ಧರ್ಮವನ್ನು ತಿಳಿಯುವ ಅತಿ ಸುಲಭದ ವಿಧಾನವಾಗಿದೆ. ಮಹಾಪುರುಷರ ನಡೆಯಲ್ಲಿ ಶಾಶ್ವತವಾದ ಧರ್ಮದ ಹೆಜ್ಜೆ ಗುರುತುಗಳು ಮೂಡಿರುತ್ತವೆ ಎಂದು ಚಾತುರ್ವಸ್ಯ ವ್ರತನಿಷ್ಠರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿವರಣೆ ನೀಡಿದರು.


31ನೇ ಅನಾವರಣ ಚಾತುರ್ವಸ್ಯ ನಿಮಿತ್ತ ಅಶೋಕೆಯ ಗುರುದೃಷ್ಟಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಠದ 33ನೇ ಗುರುವರ್ಯರಾದ ಎಂಟನೆ ಶ್ರೀರಾಘವೇಶ್ವರ ಶ್ರೀಗಳ ದಿನಚರಿ ಅನಾವರಣದಲ್ಲಿ ಶ್ರೀಗಳು ಆಶೀರ್ವಚನ ಅನುಗ್ರಹಿಸಿದರು.

ನಮ್ಮ ಸನಾತನ ಪರಂಪರೆಯಲ್ಲಿ ಶ್ರುತಿ, ಸ್ಮೃತಿ, ಪುರಾಣ, ವೇದಗಳ ಮುಖೇನ ಧರ್ಮಜ್ಞಾವ ಕೊಡುವ ವಿವಿಧ ಪಂಥಗಳಿವೆ. ಅನೇಕಾನೇಕ ಋಷಿ- ಮುನಿಗಳಿತ್ತ ಉಪದೇಶಾಮೃತಗಳ ಮಹಾ ನಿಕ್ಷೇಪಗಳಿವೆ. ವಿವಿಧ ತತ್ವ, ಆದರ್ಶಗಳನ್ನು ಒಳಗೊಂಡಿರುವ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು? ಯಾವುದು ಯುಕ್ತವಾದ ಧರ್ಮತತ್ವ? ಎನ್ನುದನ್ನು ನಿರ್ಧರಿಸಲಾಗದ ಸಾಮಾನ್ಯ ಹುಡುಕಾಟದಲ್ಲಿಯೇ ಬಸವಳಿಯುವ ಸಾಧ್ಯತೆಗಳಿವೆ. ಈ ಗೊಂದಲ ಪರಿಹಾರಕ್ಕೆ ಮಹಾಪುರುಷರು ನಡೆದು ತೋರಿದ ದಾರಿಯೊಂದೇ ಧರ್ಮವನ್ನು ಪಡೆಯಲು ಸರಳ ಮತ್ತು ಸುಲಭದ ದಾರಿ. ಇದಕ್ಕೆ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಸಾರ್ವಕಾಲಿಕ ನಿದರ್ಶನ. ಇದೇ ರೀತಿ ಇಂದು ಅನಾವರಣಗೊಂಡ ಶ್ರೀಮಠದ 33ನೇ ಪೀಠಾಧ್ಯಕ್ಷರಾದ ಬ್ರಹ್ಮೈಕ್ಯ ಅಷ್ಟಮ ಶ್ರೀರಾಘವೇಶ್ವರ ಶ್ರೀಗಳು ಅನುಗ್ರಹಿಸಿದ ದಿನಚರಿ ನಮ್ಮ ಪಥಸಂಚಲನಕ್ಕೆ ಬೆಳಗು ದೀಪವಾಗಿದೆ. ಇಂಗಿ ಹೋಗಿದ್ದ ತಮ್ಮ ಕಣ್ಣಿನ ದೃಷ್ಟಿ ಪ್ರಭೆಯನ್ನು ತಮ್ಮ ಛಲ ಮತ್ತು ಘೊರ ತಪಃಶಕ್ತಿಯಿಂದ ಮರಳಿ ಪಡೆದ ಪರಾತ್ಪರ ಗುರುವರ್ಯರು ದಿನಚರಿಯ ಮೂಲಕ ಬರೆದಿಟ್ಟ ಧರ್ಮಸಂದೇಶ ಪ್ರತಿ ಶಿಷ್ಯಭಕ್ತರಿಗೆ ಮಾರ್ಗದರ್ಶನವಾಗಿದೆ. ಈ ದಿನಚರಿಯ ಅಧ್ಯಯನ ಮತ್ತು ಅನುಕರಣೆ ನಡೆಯುವಂತಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.

ಐಐಟಿ ನಿವೃತ್ತ ಅಧಿಕಾರಿ ಎಲ್.ಜಿ. ಭಟ್ಟ ಗದ್ದೆ ಅನಾವರಣ ನೆರವೇರಿಸಿದರು. ಶ್ರೀಗಳಿಂದ ‘ಕಾಲ’ ಕುರಿತ ಸರಣಿ ಪ್ರವಚನ ನಡೆಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಪೀಠದ ಗೌರವಾಧ್ಯಕ್ಷ ಡಿ.ಡಿ. ಶರ್ಮ, ಚಾತುರ್ವಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಶ್ರೀಗಳ ಕಾರ್ಯದರ್ಶಿ ಜಿ.ಕೆ. ಮಧು, ಮಹಾಮಂಡಲ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ,ಕಾರ್ಯಾಲಯ ನಿರ್ವಾಹಕ ಜಿ.ವಿ. ಹೆಗಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net