ಸವಣೂರಲ್ಲಿ ಫುಟ್​ಪಾತ್ ಒತ್ತುವರಿ…ಜನರಿಗೆ ಟ್ರಾಫಿಕ್ ಕಿರಿಕಿರಿ…

SAVANUR MARKET TRAFIC
Published on

ಸವಣೂರ: ಪಟ್ಟಣದಲ್ಲಿ ಫುಟ್​ಪಾತ್ ಒತ್ತುವರಿ ಹಾಗೂ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವ ಕಾರಣದಿಂದ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.

ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಎಸ್​ಬಿಐ, ಕರ್ನಾಟಕ ಬ್ಯಾಂಕ್, ಎಂಜಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್​ಗಳಿವೆ. ಹೀಗಾಗಿ, ಬ್ಯಾಂಕ್​ಗೆ ಆಗಮಿಸುವ ಗ್ರಾಹಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವ ಕಾರಣ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಮುಖ್ಯ ಮಾರುಕಟ್ಟೆಯಲ್ಲಿ ಫುಟ್​ಪಾತ್ ಸಂಪೂರ್ಣ ಒತ್ತುವರಿಯಾಗಿದೆ. ಅಂಗಡಿಕಾರರು, ವ್ಯಾಪಾರಸ್ಥರು ಸಾಮಗ್ರಿಗಳನ್ನಿಡಲು ಹಾಗೂ ಸಣ್ಣ ವ್ಯಾಪಾರಿಗಳು ಡಬ್ಬಾ ಅಂಗಡಿಗಳನ್ನಿಟ್ಟುಕೊಂಡು ಫುಟ್​ಪಾತ್ ಸಂಪೂರ್ಣ ಒತ್ತುವರಿ ಮಾಡಿಕೊಂಡಿದ್ದಾರೆ. ಜನರಿಗೆ ಸಂಚರಿಸಲು ಫುಟ್​ಪಾತ್ ಇರದ ಕಾರಣ ಮುಖ್ಯ ರಸ್ತೆಯಲ್ಲೇ ಓಡಾಡುವಂತಾಗಿದೆ. ಫುಟ್​ಪಾತ್ ಒತ್ತುವರಿಯಾಗಿದ್ದರೂ, ಪುರಸಭೆ ಹಾಗೂ ಸಂಬಂಧಿಸಿದ ಇತರ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.

ದ್ವಿಪಥ ರಾಜ್ಯ ಹೆದ್ದಾರಿಯಲ್ಲಿ ದಟ್ಟಣೆ:

ಪಟ್ಟಣದ ರೇಣುಕಾಚಾರ್ಯ ದೇವಸ್ಥಾನ ವೃತ್ತ (ಬಂಕಾಪುರ ಕ್ರಾಸ್)ದಿಂದ ಡಾ. ವಿ.ಕೃ. ಗೋಕಾಕ ವೃತ್ತ ಹಾಗೂ ಶಿಗ್ಗಾಂವಿ ಕ್ರಾಸ್​ನಿಂದ ಲಕ್ಷೆ್ಮೕಶ್ವರ ಕ್ರಾಸ್​ವರೆಗೂ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಫುಟ್​ಪಾತ್ ಸಂಪೂರ್ಣ ಒತ್ತುವರಿಯಾಗಿದೆ. ಹೆದ್ದಾರಿಯ ಒಂದು ಭಾಗದಲ್ಲಿ ಸ್ಥಳೀಯರು ನಿತ್ಯವೂ ವಾಹನ ನಿಲುಗಡೆ ಮಾಡುತ್ತಾರೆ. ಇದರಿಂದಲೂ ಪಟ್ಟಣದಲ್ಲಿ ಹೆದ್ದಾರಿ ಮೂಲಕ ಸಾಗುವ ವಾಹನ ಸವಾರರು ಪರದಾಡುವಂತಾಗಿದೆ.

ಫುಟ್​ಪಾತ್ ಒತ್ತುವರಿ ತೆರವುಗೊಳಿಸಿ, ವಾಹನ ನಿಲುಗಡೆಗೆ ನಿಗದಿತ ಸ್ಥಳ ಗುರುತು ಮಾಡಿದಲ್ಲಿ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಸಾರ್ವಜನಿಕರು ವಾಹನಗಳ ಕಿರಿಕಿರಿಯಿಂದ ನಿಟ್ಟುಸಿರು ಬಿಡಲು ಸಾಧ್ಯ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕಿದೆ.

ಪಟ್ಟಣದ ಮಾರುಕಟ್ಟೆ, ಬ್ಯಾಂಕ್​ಗೆ ತೆರಳಲು ಜೀವಭಯ ಕಾಡುತ್ತದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಾರೆ. ಯಾರು ಹೇಳೋರು ಇಲ್ಲ ಕೇಳೋರು ಇಲ್ಲ, ಬೈಕ್ ಸವಾರರು ಬೈಕ್​ನೊಂದಿಗೆ ಮೈಮೇಲೆ ಬರುತ್ತಾರೆ. ಅತ್ಯಂತ ಸಣ್ಣ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ಸಹ ಸೂಕ್ತ ಜಾಗ ಇಲ್ಲದಿರುವುದು, ಫುಟ್​ಪಾತ್ ಒತ್ತುವರಿ ಸಮಸ್ಯೆಗೆ ಕಾರಣವಾಗಿದೆ. | ಶಿವಾನಂದ ಬಡಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಪುಟ್​ಪಾತ್ ಒತ್ತುವರಿ ತೆರವಿಗಾಗಿ ಬೀದಿಬದಿ ವ್ಯಾಪಾರಸ್ಥರ ಸಭೆ ಕೈಗೊಂಡು ಒತ್ತುವರಿ ತೆರವುಗೊಳಿಸಲು ಈಗಾಗಲೇ ಸೂಚಿಸಿ, ಸಮಯ ನೀಡಲಾಗಿದೆ. ಸಮಯ ಮೀರಿ ಉಳಿಯುವ ಡಬ್ಬಿ ಅಂಗಡಿಗಳನ್ನು ತೆರವುಗೊಳಿಸಲಾಗುವುದು. ಪಟ್ಟಣದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ಪೋಲಿಸ್ ಇಲಾಖೆಯೊಂದಿಗೆ ರ್ಚಚಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. | ರೇಣುಕಾ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ, ಸವಣೂರ ಪಟ್ಟಣದ ಮಾರುಕಟ್ಟೆಯಲ್ಲಿ ರ್ಪಾಂಗ್​ಗಾಗಿ ಸೂಕ್ತ ಸ್ಥಳಾವಕಾಶ ಕೊರತೆ ಹಾಗೂ ಫುಟ್​ಪಾತ್ ಒತ್ತುವರಿಯಿಂದ ನಿತ್ಯ ಸಾರ್ವಜನಿಕರು ಪರದಾಡುವಂತಾಗಿದೆ. ಪುರಸಭೆ ಸಹಕಾರದೊಂದಿಗೆ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕೈಗೊಂಡು ನಂತರ ರಸ್ತೆಯಲ್ಲಿ, ಅನಧಿಕೃತ ಸ್ಥಳದಲ್ಲಿ ನಿಲ್ಲುವ ವಾಹನಗಳಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಈ ಹಿಂದೆ ರೂಪಿಸಿರುವ ರ್ಪಾಂಗ್ ನಿಯಮ ಪಾಲಿಸಲು ಹಾಗೂ ಸ್ಥಳೀಯರ ಸಹಕಾರ ಕೊರತೆಯಿಂದಾಗಿ ಟ್ರಾಫಿಕ್ ನಿಯಂತ್ರಣ ಸಾಧ್ಯವಾಗುತ್ತಿಲ್ಲ. | ಆನಂದ ಒನಕುದರೆ, ಪಿಐ, ಸವಣೂರ ಪೊಲೀಸ್ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net