ಆರ್.ಆರ್.ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ

bbmp office
Published on

ಬೆಂಗಳೂರು: ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಅಡತಡೆಯಿಲ್ಲದ ಪಾದಚಾರಿ ಮಾರ್ಗ ವ್ಯವಸ್ಥೆಗೆ ಆದ್ಯತೆ ನೀಡುವ ಹಿನ್ನೆಲೆ, ವಿವಿಧ ವಾರ್ಡ್ ಪ್ರದೇಶಗಳಲ್ಲಿ ಫುಟ್‌ಪಾತ್ ಅನ್ನು ಒತ್ತುವರಿ ಮಾಡಿಕೊಂಡಿದ್ದ ಹಲವು ಒತ್ತುವರಿ ಭಾಗಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಕೆಂಗೇರಿ ವಿಭಾಗಕ್ಕೆ ಒಳಪಡುವ ಮಾಗಡಿ ಮುಖ್ಯರಸ್ತೆಯಿಂದ ಬಿಇಎಂಎಲ್ ಲೇಔಟ್‌ವರೆಗೆ, ರಾಜರಾಜೇಶ್ವರಿನಗರ ವಿಭಾಗದ ಮೈಸೂರು ಮುಖ್ಯರಸ್ತೆಯ ಗೋಪಾಲನ್ ಮಾಲ್ ಆರ್ಚ್‌ನಿಂದ ಐಡಿಯಲ್ ಹೋಮ್ಸ್ನ 18ನೇ ಅಡ್ಡರಸ್ತೆವರೆಗೆ ಪಾದಚಾರಿ ಮಾರ್ಗದಲ್ಲಿ ಮಳಿಗೆದಾರರು ಹಾಗೂ ಕೆಲ ನಾಗರಿಕರು ಒತ್ತುವರಿ ಮಾಡಿದ್ದ ಭಾಗಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸಲಾಗಿದೆ.

ತೆರವಿಗೂ ಮುನ್ನ ಒತ್ತುವರಿದಾರರಿಗೆ ಸ್ಥಳ ತೆರವು ಮಾಡುವಂತೆ ತಿಳಿಸಲಾಗಿತ್ತು. ಇದಕ್ಕೆ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು, ತಾತ್ಕಾಲಿಕ ಮೇಲ್ಛಾವಣಿ, ತಾತ್ಕಾಲಿಕ ಶೆಡ್, ತಡೆಗೋಡೆಗಳು, ಜಾಹೀರಾತು ಫಲಕಗಳನ್ನು ತೆಗೆದುಹಾಕಲಾಯಿತು. ಜತೆಗೆ ಮಾರ್ಗದಲ್ಲಿ ಸುರಿದಿದ್ದ ಮಣ್ಣು ಮತ್ತು ತ್ಯಾಜ್ಯವನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಅಡೆತಡೆಗಳಿಲ್ಲದ ುಟ್‌ಪಾತ್ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಯಿತು ಎಂದು ವಲಯ ಆಯುಕ್ತ ಡಾ. ಬಿ.ಸಿ.ಸತೀಶ್ ತಿಳಿಸಿದ್ದಾರೆ.

ಏಕ ಬಳಕೆ ಪ್ಲಾಸ್ಟಿಕ್ ತಪಾಸಣೆ, ದಂಡ:

ತೆರವು ಕಾರ್ಯಾಚರಣೆ ಜತೆಯಲ್ಲೇ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ವಿವಿಧ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ನಿಷೇಧಿತ ಪ್ಲಾಸ್ಟಿ ಬಳಸುತ್ತಿದ್ದ 37 ಮಳಿಗೆದಾರರಿಗೆ ಒಟ್ಟು 64,300 ರೂ. ದಂಡದ ಮೊತ್ತವನ್ನು ವಸೂಲಾತಿ ಮಾಡಿ, ಮತ್ತೊಮ್ಮೆ ನಿಯಮ ಉಲ್ಲಂಸಿದಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಗುರುವಾರ (ಆ.14) ಕೆಂಗೇರಿ ವಿಭಾಗದ ಕೃಷ್ಣಪ್ರಿಯ ಕನ್ವೆನ್ಷನ್ ಹಾಲ್ನಿಂದ ಮೈಸೂರು ರಸ್ತೆಯ ಕಿಯಾ ಶೋರೂಂವರೆಗೆ ಹಾಗೂ ಮತ್ತಿಕೆರೆ ಮುಖ್ಯರಸ್ತೆಯಿಂದ ಯಶವಂತಪುರ ಫ್ಲವರ್ ಮಾರ್ಕೆಟ್ (ಎಡಭಾಗ) ವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ದಿನ ನಿಗದಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net