

ಬೆಂಗಳೂರು: ಪಾದಚಾರಿ ಮಾರ್ಗಗಳಲ್ಲಿ ಇಟ್ಟುಕೊಂಡಿದ್ದ ತಾತ್ಕಾಲಿಕ ಅಂಗಡಿಗಳನ್ನು ಕೆ.ಆರ್.ಪುರ ಸಂಚಾರ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಸೋಮವಾರ ತೆರವು ಮಾಡಿದರು. ಇತ್ತೀಚೆಗೆ ನಡೆದ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಕಮಲ್ ಪಂತ್‌ಗೆ ಪಾದಚಾರಿ ಮಾರ್ಗ ಅತಿಕ್ರಮ ಮಾಡಿಕೊಂಡಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿದರು.
ಕೆ.ಆರ್.ಪುರ ಸಂಚಾರ ಠಾಣೆ ಪೊಲೀಸರು ಐಟಿಐ ಗೇಟ್ನಿಂದ ಬಿಬಿಎಂಪಿ ಜಂಕ್ಷನ್ ವರೆಗೆ ಪಾದಚಾರಿ ಮಾರ್ಗ ಅತಿಕ್ರಮ ಮಾಡಿಕೊಂಡಿದ್ದ ಕಂಬಳಿ, ಗೊಂಬೆಗಳು, ಕಲಾಕೃತಿಗಳು, ಹೆಲ್ಮೆಟ್ ಮತ್ತು ಇನ್ನಿತರ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಿದರು. ಬಿಬಿಎಂಪಿಯ ವಿವಿಧ ಘಟಕಗಳಿಂದ 3 ಟ್ರ್ಯಾಕ್ಟರ್‌ಗಳು ಮತ್ತು ಕಾರ್ಮಿಕರನ್ನು ಬಳಸಿಕೊಂಡು ಪಾದಚಾರಿ ಮಾರ್ಗವನ್ನು ತೆರವು ಮಾಡಲಾಗಿದೆ.