ಕಾಲ್ಚೆಂಡು ಪಂದ್ಯಾಟದ ಟೈಸ್ ಪ್ರತಿ ಬಿಡುಗಡೆ

23adarshkdga1
Published on

ಮಡಿಕೇರಿ: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್ ಸಹಯೋಗದಲ್ಲಿ ಏ೧೦ ರಿಂದ ೨೫ ರವರೆಗೆ ಅಮ್ಮತ್ತಿಯ ಕೊಡಗು ಫುಟ್ಬಾಲ್ ಅಸೋಸಿಯೇಷನ್ ಮೈದಾನದಲ್ಲಿ ಹಮ್ಮಿಕೊಂಡಿರುವ ಕಾಲ್ಚೆಂಡು ಪಂದ್ಯಾಟದ ಟೈಸ್ ಪ್ರತಿಯನ್ನು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಲಿಜೇಶ್ ಬುಧವಾರ ಬಿಡುಗಡೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಮೋಹನ್ ಅಯ್ಯಪ್ಪ, ಪಂದ್ಯಾಟ ಯಶಸ್ಸು ಕಾಣಬೇಕಾದರೆ ತಂಡದ ಪ್ರತೀ ಆಟಗಾರರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್‌ನೊಂದಿಗೆ ಕೈ ಜೋಡಿಸಿದರೆ ಮಾತ್ರ ಪಂದ್ಯಾಟ ಯಶಸ್ಸುಗೊಳ್ಳಲು ಸಾಧ್ಯ. ಸಮಯಕ್ಕೆ ಸರಿಯಾಗಿ ಎಲ್ಲಾ ತಂಡದವರು ಆಗಮಿಸಿ ಪಂದ್ಯಾಟ ಯಶಸ್ಸುಗೊಳಿಸಬೇಕು ಎಂದು ಮನವಿ ಮಾಡಿದರು.

ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಣಿಯಾದ ಹದಿನಾರು ತಂಡಗಳು ಜಿಲ್ಲೆಯ ಫುಟ್ಬಾಲ್ ಸಂಸ್ಥೆಯ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಯಾವುದಾದರೂ ತಂಡಗಳು ಅನುಮತಿ ಪಡೆಯದೆ ಪಂದ್ಯಾಟ ಆಯೋಜನೆ ಮಾಡಿದರೆ ಅಂತಹ ತಂಡಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಪಂದ್ಯಾಟದಲ್ಲಿ ತಂಡದ ಆಟಗಾರರು, ಕೋವಿಡ್ ನಿಯಮಗಳನ್ನು ಪಾಲಿಸಬೇಕಾಗಿ ಮನವಿ ಮಾಡಿದರು.

ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಮತ್ತು ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಈಗಾಗಲೇ ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಣಿಯಾದ ೧೬ ತಂಡಗಳನ್ನು ೪ ಗುಂಪುಗಳಾಗಿ ವಿಂಗಡಿಸಲಾಗಿದೆ. ಲೀಗ ಹಂತದಲ್ಲಿ ಪ್ರತೀ ತಂಡಕ್ಕೆ ಮೂರು ಪಂದ್ಯಗಳು ಆಡಲು ಅವಕಾಶವಿದೆ. ಲೀಗ್ ಹಂತದಲ್ಲಿ ನಾಲ್ಕು ಗುಂಪುಗಳಿಂದ ಮೊದಲ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆಯಲಿದೆ. ಕ್ವಾರ್ಟರ್ ಫೈನಲ್ ಪಂದ್ಯ ನಾಕೌಟ್ ನಡೆಯಲಿದ್ದು, ಗೆಲುವು ಪಡೆದ ನಾಲ್ಕು ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ವೇದಿಕೆಯಲ್ಲಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಲಿಜೇಶ್ ಅಮ್ಮತ್ತಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಜಗದೀಶ್, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಐಚ್ಚೆಟ್ಟೀರ ಪೊನ್ನಪ್ಪ, ಉಪಾಧ್ಯಕ್ಷರಾದ ದೇಚಮ್ಮ, ಖಜಾಂಜಿ ದೀಪು ಮಾಚಯ್ಯ, ಸದಸ್ಯರಾದ ಜಗದೀಶ್ ಮರಗೋಡು, ಮಿಲನ್ಸ್ ಫುಟ್ಬಾಲ್ ಕ್ಲಬ್‌ನ ಸದಸ್ಯರು ಹಾಗೂ ಎಲ್ಲಾ ತಂಡದ ನಾಯಕರು ಹಾಗೂ ವ್ಯವಸ್ಥಾಪಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net