

ಚಿಕ್ಕಮಗಳೂರು: ಹೊನಲು ಬೆಳಕಿನ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಾಫಿ ಲ್ಯಾಂಡ್ ಚಿಕ್ಕಮಗಳೂರು ಫುಟ್ಬಾಲ್ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಬೆಂಗಳೂರಿನ ಒಎಲ್‍ಜಿ ಫುಟ್ಬಾಲ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಪೆನಾಲ್ಟಿ ಶೂಟ್ಔಟ್:
ಫೈನಲ್ ಪಂದ್ಯಾವಳಿಯಲ್ಲಿ ನಿಗದಿತ ಸಮಯ ಮುಗಿದಾಗ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟ್‍ಔಟ್ ನೀಡಲಾಯಿತು. ಪೆನಾಲ್ಟಿ ಶೂಟ್‍ಔಟ್‍ನಲ್ಲಿ ಚಿಕ್ಕಮಗಳೂರು 0-2 ಗೋಲು ಅಂತರದಿಂದ ಬೆಂಗಳೂರು ತಂಡದ ಮುಂದೆ ಸೋಲೊಪ್ಪಿಕೊಂಡಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ಸ್ ನಲ್ಲಿ ಕಾಫಿ ಲ್ಯಾಂಡ್ ಚಿಕ್ಕಮಗಳೂರು ತಂಡ ಮೈಸೂರು ತಂಡವನ್ನು ಪೆನಾಲ್ಟಿ ಶೂಟ್‍ಔಟ್‍ನಲ್ಲಿ 5-4 ಅಂತರದಿಂದ ಪರಾಭವಗೊಳಿಸಿ ಫೈನಲ್‍ಗೆ ಪ್ರವೇಶ ಪಡೆದರೆ ಇನ್ನೊಂದು ಸೆಮಿಫೈನಲ್ಸ್ ನಲ್ಲಿ ಒಎಲ್‍ಜಿ ಬೆಂಗಳೂರು ತಂಡ ಮಣಿಪಾಲ್ ತಂಡವನ್ನು ಪೆನಾಲ್ಟಿ ಶೂಟ್‍ಔಟ್‍ನಲ್ಲಿ 5-4 ಗೋಲುಗಳಿಂದ ಸೋಲಿಸಿ ಫೈನಲ್‍ಗೆ ಅರ್ಹತೆ ಪಡೆಯಿತು.
ಬಾಲಕರಲ್ಲಿಶಿವಮೊಗ್ಗ ತಂಡಕ್ಕೆ ಜಯ:
14 ವರ್ಷದೊಳಗಿನ ಬಾಲಕರ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 8 ತಂಡಗಳು ಭಾಗವಹಿಸಿದ್ದವು. ಫೈನಲ್‍ನಲ್ಲಿ ಶಿವಮೊಗ್ಗದ ಫುಟ್ಬಾಲ್ ತಂಡವು ಅರಸೀಕೆರೆ ತಂಡವನ್ನು 2-0 ಗೋಲುಗಳಿಂದ ಪರಾಭವಗೊಳಿಸಿ ಪ್ರಶಸ್ತಿಗೆ ಭಾಜನವಾಯಿತು.
ಕಾಫಿ ಲ್ಯಾಂಡ್ ಚಿಕ್ಕಮಗಳೂರು ಫುಟ್ಬಾಲ್ ತಂಡದ ಆಟಗಾರ ಲಾಯಸ್ಟನ್ ಪಂದ್ಯಾವಳಿಯ ಅತ್ಯುತ್ತಮ ಗೋಲರ್ ಪ್ರಶಸ್ತಿಗೆ ಭಾಜನರಾದರೆ, ಅತ್ಯುತ್ತಮ ಸ್ಟೈಕರ್ ಆಗಿ ಚಿಕ್ಕಮಗಳೂರು ಫ್ರೆಂಡ್ಸ್ ಫುಟ್ಬಾಲ್ ತಂಡದ ಸಂದೇಶ ಹೊರಹೊಮ್ಮಿದರು. ಬೆಂಗಳೂರಿನ ಒಎಲ್‍ಜಿ ತಂಡದ ಡೇವಿಡ್ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾದರು.