ಕ್ರೀಡೆಯಿಂದ ಸಮಾಜದಲ್ಲಿ ಸಾಮರಸ್ಯ

IMG_20230528_165235
Published on

ಮಡಿಕೇರಿ:

ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಕ್ರೀಡಾಕೂಟಗಳು ಬಹಳ ಮುಖ್ಯ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ೨೫ನೇ ವರ್ಷದ ಡಿ. ಶಿವಪ್ಪ ಸ್ಮಾರಕ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಸುಂಟಿಕೊಪ್ಪದಲ್ಲಿ ೨೫ ವಷ೯ಗಳಿಂದ ಫುಟ್ಬಾಲ್ ಪಂದ್ಯಾಟ ಆಯೋಜಿಸುತ್ತಿರುವ ಶಿವಪ್ಪ ಕುಟುಂಬದ ಪ್ರಯತ್ನ ಶ್ಲಾಘನೀಯ ಎಂದು ಇದೇ ವೇಳೆ ಹೇಳಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರೀಡಾಚಟುವಟಿಕೆಗಳಿಗರ ಯದುವೀರ್ ಒಡೆಯರ್ ಮೆಚ್ಚುಗೆ ವ್ಯಕ್ತಪಡಿಸಿದರು.ಕೊಡಗಿನಲ್ಲಿ ಕ್ರೀಡಾಚಟುವಟಿಕೆಗೆ ಮುಂದಿನ ದಿನಗಳಲ್ಲಿಯೂ ತನ್ನಿಂದಾದ ಪ್ರೋತ್ಸಾಹ ನೀಡುವೆ ಎಂದರು.
ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾಟದ ಪ್ರಾಯೋಜಕ ವಿಶಾಲ್ ಶಿವಪ್ಪ ಮಾತಾಡಿ, ಅಂತಾರರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ಸುಂಟಿಕೊಪ್ಪ ಶಾಲಾ ಕ್ರೀಡಾಂಗಣ ರೂಪಿಸುವ ಯೋಜನೆಯಿದೆ. ಶಾಸಕ ಡಾ. ಮಂಥರ್ ಗೌಡ ಸಹಕಾರದಿಂದ ಸುಂಟಿಕೊಪ್ಪಕ್ಕೆ ಸುಸಜ್ಜಿತ ಕ್ರೀಡಾಂಗಣ ಒದಗಿಸಲು ಪ್ರಯತ್ನಿಸಲಾಗುವುದು. ಬೆಟ್ಟಗೇರಿ ಎಸ್ಟೇಟ್ ಮಾಲೀಕ ವಿನೋದ್ ಶಿವಪ್ಪ ಪ್ರಯತ್ನದಿಂದ ೨೫ ವಷ೯ಗಳಿಂದ ಈ ಪಂದ್ಯಾವಳಿ ಬೆಳೆಸಿಕೊಂಡು ಬರಲಾಗಿದೆ.
ಮುಂದೆಯೂ ಈ ಕ್ರೀಡಾ ಪರಂಪರೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ನಟಿ ಶುಭ್ರ ಅಯ್ಯಪ್ಪ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ವಿಶಾಲ್ ಶಿವಪ್ಪ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ, ಪ್ರಸಾದ್ ಕುಟ್ಟಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಸುಂಟಿಕೊಪ್ಪ ಪಿಡಿಒ ವೇಣುಗೋಪಾಲ್, ಜಿಲ್ಲಾಡಳಿತ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಬ್ಲೂ ಬಾಯ್ಸ ಯುವಕ ಸಂಘದ ಅಧ್ಯಕ್ಷ ಆಲಿಕುಟ್ಟಿ ಸ್ಥಾಪಕಾಧ್ಯಕ್ಷ ಜರ್ಮಿ ಡಿಸೋಜಾ, ಉದ್ಯಮಿ ಪ್ರಶಾಂತ್ ವೆಂಕಟರಮಣ, ಪ್ರಮುಖರಾದ ಎಂ.ಎ. ಉಸ್ಮಾನ್ ಇದ್ದರು.

ಪಂದ್ಯಾವಳಿ ಉದ್ಘಾಟನೆಗೂ ಮೊದಲು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಗಣ್ಯರನ್ನು ಸುಂಟಿಕೊಪ್ಪ ಬಸ್ ನಿಲ್ದಾಣ ಬಳಿಯಿಂದ ಪಂದ್ಯಾವಳಿ ನಡೆದ ಜಿ.ಎಂ.ಪಿ ಶಾಲಾ ಮೈದಾನ ತನಕ ಮೆರವಣಿಗೆಯಲ್ಲಿ ಕರೆ ತರಲಾಯಿತು. ಈ ಸಂದರ್ಭದಲ್ಲಿ ಡೊಳ್ಳುಕುಣಿತ, ಬೊಂಬೆ ಕುಣಿತ, ಕೊಡವ ಓಲಗ ಗಮನ ಸೆಳೆಯಿತು. ಸಂತೆಯ ದಿನವಾದ ಭಾನುವಾರ ನಡೆದ ಈ ಮೆರವಣಿಗೆ ಪಟ್ಟಣದಲ್ಲಿ ಸೇರಿದ್ದ ಸಾವಿರಕ್ಕೂ ಅಧಿಕ ಮಂದಿಯನ್ನು ಆಕರ್ಷಿಸಿತು.

ರಾಜಕೀಯದಲ್ಲಿ ಖಂಡಿತಾ ಆಸಕ್ತಿ ಇಲ್ಲ. ಮೈಸೂರು ಅರಮನೆ ಪರಂಪರೆ ಮುಂದುವರೆಸಿಕೊಂಡು ಹೋಗಲು ಬದ್ಧ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕ?ಷ್ಣರಾಜ ಒಡೆಯರ್ ಹೇಳಿದರು. ರಾಜಕೀಯದಿಂದ ದೂರ ಎಂದು ಈಗಾಗಲೇ ಹಲವಾರು ಸಲ ಹೇಳಿದ್ದೇನೆ. ಮುಂದೆಯೂ ರಾಜಕೀಯದಿಂದ ದೂರವೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net