

ಹುಬ್ಬಳ್ಳಿ: ಇಲ್ಲಿಯ ಕುಸುಗಲ್ ರಸ್ತೆಯಲ್ಲಿರುವ ಮಹಾದುರ್ಗಾ ಕಾಲನಿಯ ಗ್ರೋವಿಂಗ್ ಬಡ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಸೋಮವಾರ ಮಾತೃ ವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಕ್ಕಳ ತಾಯಂದಿರಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮನೋರಂಜನೆ ವ್ಯಕ್ತವಾಯಿತು. ಅಷ್ಟೇ ಅಲ್ಲದೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಂತಹ ತಾಯಿಯ ಪಾದ ಪೂಜಾ ಕಾರ್ಯಕ್ರಮವು ಇಂದಿನ ವಿಶೇಷವಾಗಿತ್ತು. ರಂಗೋಲಿ ಸ್ಪರ್ಧೆ, ಹಾಡಿನ ಸ್ಪರ್ಧೆ ಮತ್ತು ರ‌್ಯಾಂಪ್ ವಾಕ್, ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ ಅತಿಥಿಗಳಾಗಿ ಆಗಮಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಮ್ಯಾಗೇರಿ, ಪತ್ನಿ ಪ್ರೇಮ ಮ್ಯಾಗೇರಿ, ಸಂಸ್ಥೆಯ ಕಾರ್ಯದರ್ಶಿ ಯಶೋಧಾ ಬಂಡಿವಡ್ಡರ್, ನಿರ್ಮಲಾ, ಮುಖ್ಯೋಪಾಧ್ಯಾಯಿನಿ ಸ್ವಾತಿ .ಕೆ.ಜಿ. ಇತರರು ಇದ್ದರು.