

ಸುಂಟಿಕೊಪ್ಪ: ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಪಾಲನೆಗೆ ನಿಗದಿತ ಕಾಲದಲ್ಲಿ ತಜ್ಞರಿಂದ ತಪಾಸಣೆಗೆ ಮಾಡಿಸಿಕೊಳ್ಳಬೇಕು ಎಂದು ವಕೀಲ ಲೋಕೇಶ್ ಕುಮಾರ್ ಸಲಹೆ ನೀಡಿದರು. ಸ್ಥಳೀಯ ಲಯನ್ಸ್ ಕ್ಲಬ್ ಘಟಕವು ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಅಯೋಜಿಸಿದ್ದ 15 ದಿನಗಳ ಫುಟ್ ಪಲ್ಸ್ ಥೆರಪಿ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಸಂಸ್ಥೆ ಸಾರ್ವಜನಿಕರಿಗೆ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಜನಪರ ಕಾಳಜಿಯ ಕಾರ್ಯಕ್ರಮಗಳ ಉಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು ಎಂದರು. ಶಿಬಿರ ಆಯೋಜನ ಶಶಿಕಾಂತ್ ಪೂಜಾರಿ ಮಾತನಾಡಿ, ಶಿಬಿರದಲ್ಲಿ ಫುಟ್ ಪಲ್ಸ್ ಥೆರಪಿಯು ಥೈರಾಯ್ಡ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ನಿದ್ರಾಹೀನತೆ, ಪಾರ್ಕಿನ್‌ಸನ್, ಸರ್ವಿಕಲ್, ವೆರಿಕೋಸ್ ನರ, ಕುತ್ತಿಗೆ ನೋವು, ಬೆನ್ನುನೋವು, ಸ್ನಾಯು ಸೆಳೆತ, ಸೋರಿಯಾಸಿಸ್, ಸಕ್ಕರೆ ಕಾಯಿಲೆ ಸೇರಿದಂತೆ 120ಕ್ಕೂ ಹೆಚ್ಚು ಕಾಯಿಲೆ ಶಮನಕ್ಕೆ ಪೂರಕವಾಗಿದೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಶಶಾಂಕ್ ಶ್ರೀನಿವಾಸ, ಕಾರ್ಯದರ್ಶಿ ಗ್ಲೇನ್ ಮೆನೇಜಸ್, ಕೋಶಾಧಿಕಾರಿ ಪ್ರೀತಂ, ಹಿರಿಯ ಸದಸ್ಯರಾದ ಶ್ರೀನಿವಾಸ, ಯಶೋಧರ ಪೂಜಾರಿ, ಕೆ.ಪಿ.ಜಗನಾಥ್, ಪಿ.ಜಿ.ಪೆಮ್ಮಯ್ಯ ಸಿ.ಟಿ.ಪೊನ್ನಪ್ಪ, ಹಾಜರಿದ್ದರು.