

ವಿಜಯಪುರ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗಳ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಏ. 26 ರಿಂದ ಜೂ. 4 ರ ವರೆಗೆ ನಡೆಯಲಿದೆ ಎಂದು ಪಶು ವೈದ್ಯಾಧಿಕಾರಿ(ಆಡಳಿತ) ಡಾ. ಬಸವರಾಜ ಕನಮಡಿ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲುಬಾಯಿ ಲಸಿಕೆ ಕಾರ್ಯಕ್ರಮದ ಜತೆಗೆ ಚರ್ಮಗಂಟು ರೋಗದ ವಿರುದ್ಧ ಲಸಿಕೆಯನ್ನೂ ಉಚಿತವಾಗಿ ಹಾಕಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ವಿಜಯಪುರ ತಾಲೂಕಿನಲ್ಲಿ 10,069 ದನಗಳು, 13,170 ಎಮ್ಮೆಗಳು ಸೇರಿ ಒಟ್ಟು 23,239 ವಾಸ್ತವ ಜಾನುವಾರುಗಳಿವೆ. ಲಸಿಕೆದಾರರು&1 ಮತ್ತು ಲಸಿಕೆದಾರರು&2 ಸೇರಿ ಒಟ್ಟು 50 ಜನರಿದ್ದಾರೆ. ಅಲ್ಲದೆ, ಮೇಲ್ವಿಚಾರಕರಾಗಿ 4 ಜನ ಪಶುವೈದ್ಯಾಧಿಕಾರಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಹಾಗೂ ತಾಲೂಕು ಉಸ್ತುವಾರಿ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಪ್ರಶಾಂತ ಚನಗೊಂಡ ಲಸಿಕಾ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿದರು. ಡಾ. ಸುಜಾತ ಎಸ್.ಎಂ., ಡಾ. ಬಾಳಾಸಾಹೇಬ ಭಂಡಿ, ಡಾ. ರಮೇಶ ರಾಠೋಡ ಮತ್ತಿತರರಿದ್ದರು.