

ಚಳ್ಳಕೆರೆ: ಜಾನುವಾರುಗಳ ಆರೋಗ್ಯ ರಕ್ಷಣೆಗೆ ರೈತರು ಕಾಳಜಿ ವಹಿಸಬೇಕು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಟಿ.ಎಸ್. ರೇವಣ್ಣ ಹೇಳಿದರು.
ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ಮಂಗಳವಾರ ಪಶು ಇಲಾಖೆ ವತಿಯಿಂದ ಆಯೋಜಿಸಿದ್ದ ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಿ ಮಾತನಾಡಿದರು.
ವರ್ಷದಲ್ಲಿ ಎರಡು ಬಾರಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತದೆ. ಇದನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು. ಮಳೆ-ಗಾಳಿ ಮತ್ತು ವ್ಯತಿರಿಕ್ತ ಪರಿಸರ ಗುಣದಿಂದ ಜಾನುವಾರುಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಇದರಿಂದ ರೋಗ ಬಾಧೆಗೆ ಒಳಗಾಗುವ ಜಾನುವಾರುಗಳು ಸಾವಿಗೀಡಾಗುತ್ತವೆ. ಲಸಿಕೆ ಬಗ್ಗೆ ನಿರ್ಲಕ್ಷ್ಯ ತೋರದೆ ಜಾನುವಾರುಗಳಿಗೆ ಕಾಳಜಿಯಿಂದ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ತಾಲೂಕಿನಲ್ಲಿ 60 ಸಾವಿರ ದನ ಮತ್ತು ಎಮ್ಮೆಗಳ ಸಂಖ್ಯೆ ಇದೆ. ಇಲಾಖೆಯ ಸುಮಾರು 50 ಜನ ಸಿಬ್ಬಂದಿ ನೆರವಿನೊಂದಿಗೆ ಸೆ.26ರಿಂದ ಅ.25ರತನಕ ಲಸಿಕೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಲಸಿಕೆ ಪಡೆದ ಜಾನುವಾರುಗಳಲ್ಲಿ ಉತ್ತಮ ಆರೋಗ್ಯ ಕಾಣುತ್ತೇವೆ. ಜಾನುವಾರುಗಳಿಗೆ ಸಮತೋಲನ ಆಹಾರ ಕೊಡುವ ಕಾಳಜಿ ಇರಬೇಕು. ಹಾಲು ಕೊಡುವ ಜಾನುವಾರುಗಳಿಗೆ ಹಿಂಡಿ ಮಿಶ್ರಿತ ಆಹಾರ ಕೊಡುವುದರಿಂದ ಹೈನುಗಾರಿಕೆ ಪ್ರಮಾಣವನ್ನು ಆದಾಯ ಮೂಲವಾಗಿ ಕಾಣಬಹುದು ಎಂದು ಹೇಳಿದರು.
2022ರ ಜನವರಿಯಿಂದ ಈತನಕ ಸಾವಿಗೀಡಾಗಿರುವ 3892 ಕುರಿಗಳಿಗೆ ತಲಾ 5 ಸಾವಿರದಂತೆ ಪರಿಹಾರದ ಹಣ ಬರಬೇಕಾಗಿದೆ. ಬರಪೀಡಿತ ತಾಲೂಕು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಸಾಣೀಕೆರೆ, ಚೌಳೂರು, ದೊಡ್ಡ ಉಳ್ಳಾರ್ತಿ ಕಾವಲು, ಮಲ್ಲೂರಹಳ್ಳಿ ಹಿರೇಕೆರೆ ಕಾವಲು ಸೇರಿದಂತೆ ಅಜ್ಜನಗುಡಿ ಸಮೀಪ ಗೋಶಾಲೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದೇಶ ಸಿಕ್ಕ ಕೂಡಲೇ ತಾತ್ಕಾಲಿಕ ಶೆಡ್ಡುಗಳ ನಿರ್ಮಾಣ ಮತ್ತು ನೀರು, ಮೇವಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.