

ಹುಬ್ಬಳ್ಳಿ: ಮಜೇಥಿಯಾ ಫೌಂಡೇಷನ್ ಆಶ್ರಯದಲ್ಲಿ ಶನಿವಾರ ತಾಲೂಕಿನ ರೇವಡಿಹಾಳದ ಶ್ರೀ ದಯಾನಂದ ವಿದ್ಯಾರಣ್ಯ ಭಾರತೀ ಗುರುಕುಲ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆ ಮಾಡಲಾಯಿತು.
ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿ ಮಕ್ಕಳಿಗೆ ಬಿಸಿಯೂಟ ಬಡಿಸಿ ಮಾತನಾಡಿ,
ಆಹಾರವು ದಿವ್ಯ ಶಕ್ತಿ ಹೊಂದಿದೆ. ಶರೀರದ ಅಂಗಾಂಗಳನ್ನು ವೃದ್ಧಿಪಡಿಸುತ್ತದೆ. ಮನಸ್ಸು, ಬುದ್ಧಿ, ಆಂತರಿಕ ವ್ಯಕ್ತಿತ್ವ ಬೆಳೆಸಲು ಪೂರಕವಾಗಿದೆ. ಶರೀರ ಹಾಗೂ ಬುದ್ಧಿ ಬದಲಾವಣೆಗೆ ಆಹಾರ ಪೂರಕ. ವಿದ್ಯಾರ್ಥಿಗಳಲ್ಲಿ ಅದ್ಭುತ ಶಕ್ತಿ ಇದೆ. ಕ್ರಿಯಾಶೀಲ ಮನೋಭಾವನೆ ಇದೆ. ಇದನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕಾದರೆ ಸಾಧನೆ ಮಾಡಿದವರ ಮಾರ್ಗದರ್ಶನ ಅಗತ್ಯ. ಅಂಥವರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಪರಿಸರ ದಿನ-ದಿನಕ್ಕೆ ಅಶುದ್ಧವಾಗುತ್ತಿರುವುದರಿಂದ ರೋಗಗಳು ಇಮ್ಮಡಿಯಾಗುತ್ತಿವೆ. ವಿದ್ಯಾರ್ಥಿಗಳು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಆಶೀರ್ವದಿಸಿದರು. 9 ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟ ಕೊಡುತ್ತಿರುವ ಮಜೇಥಿಯಾ ಫೌಂಡೇಷನ್‌ನವರ ಸೇವೆ ಅರ್ಥಪೂರ್ಣ ಎಂದು ಬಣ್ಣಿಸಿದರು.
ಫೌಂಡೇಷನ್ ಟ್ರಸ್ಟಿ ಡಾ.ವಿ.ಬಿ. ನಿಟಾಲಿ ಮಾತನಾಡಿ, ವಿದ್ಯಾರ್ಥಿಗಳು ಪೌಷ್ಟಿಕಯುಕ್ತ ಆಹಾರ ಸೇವನೆ ಮಾಡಬೇಕು. ಹೆಚ್ಚಿನ ತರಕಾರಿ ತಿನ್ನುವುದರಿಂದ ದೇಹಕ್ಕೆ ಅವಶ್ಯಕತೆ ಇರುವಂತಹ ಪೌಷ್ಟಿಕತೆ ದೊರೆಯುತ್ತದೆ. ಋತುಮಾನಕ್ಕೆ ತಕ್ಕಂತೆ ಆಹಾರ ಸೇವನೆ ಅತೀ ಅವಶ್ಯವಾಗಿದೆ ಎಂದರು.
ಶ್ರೀ ಮಹದೇವಾನಂದ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಫೌಂಡೇಷನ್ ಟ್ರಸ್ಟಿಗಳಾದ ಡಾ. ಜ್ಯೋತಿ ಕಾಚಾಪುರ, ಅಮೃತಭಾಯ್ ಪಟೇಲ್, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಸಿಇಒ ಸುನೀಲ ಕುಕ್ಕನೂರ, ನವೀನ ಮಾಲಿನ, ರೋಹನ ಗೊಂದಕರ, ಅಕ್ಷಯ ಟ್ರಸ್ಟಿನ ಕಾರ್ಯದರ್ಶಿ ಶುಭಾ ಬಿಜಾಪುರ ಇತರರು ಇದ್ದರು.
ಆಕಾಶ ಗಣಿ ಸ್ವಾಗತಿಸಿದರು. ಶಾಲಾ ಆಡಳಿತಾಧಿಕಾರಿ ರತ್ನಾಕರ ಪೂಜಾರಿ ನಿರೂಪಿಸಿದರು. ಕೃತಿಕಾ ಮೊಘೆ ವಂದಿಸಿದರು.