ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಅಭಾವ; ಮನೆಯಿಂದಲೇ ತರಬೇಕಾಗಿದೆ ಬುತ್ತಿ!

15-02-rama-anganavadi1
Published on

| ಮರಿದೇವ ಹೂಗಾರ ಹುಬ್ಬಳ್ಳಿ

ಕೋವಿಡ್ ಹಿನ್ನೆಲೆಯಲ್ಲಿ ಸತತ ಎರಡು ವರ್ಷಗಳಿಂದ ಬಂದ್ ಆಗಿದ್ದ ಅಂಗನವಾಡಿ ಕೇಂದ್ರಗಳು ಇದೀಗ ಫೆ.14ರಿಂದ ಪುನಾರಂಭಗೊಂಡಿದ್ದರೂ, ಆಹಾರ ಧಾನ್ಯ ಪೂರೈಕೆಯಾಗದೇ ಮಕ್ಕಳು ಮನೆಯಿಂದ ಬುತ್ತಿ ಕಟ್ಟಿಕೊಂಡು ತರಬೇಕಾದ ದುಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, 44,312 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಉಳಿದವು ಬಾಡಿಗೆ 8,640 ಕೇಂದ್ರಗಳಿಗೆ ಸ್ವಂತ ಅಡುಗೆ ಮನೆಗಳಿಲ್ಲ. ಸಾಕಷ್ಟು ಕೇಂದ್ರಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಊಟ, ನೀರು ಇಲ್ಲದೆ ಮಕ್ಕಳು ಕೇಂದ್ರಗಳಿಗೆ ತೆರಳುವುದು ಹೇಗೆ ಎಂಬುದು ಪಾಲಕರ ಪ್ರಶ್ನೆಯಾಗಿದೆ.

ಪ್ರತಿ ತಿಂಗಳು ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆಹಾರ ಧಾನ್ಯ, ಮೊಟ್ಟೆ ಪೂರೈಕೆ ಮಾಡಬೇಕು. ಈಗ ಪೂರೈಕೆಯಾಗದೇ ಇರುವುದರಿಂದ ಪಾಲಕರು, ತಮ್ಮ ಮನೆಯಿಂದ ಊಟದ ಡಬ್ಬಿ ಕಟ್ಟಿ ಕಳುಹಿಸಿಕೊಡುತ್ತಿದ್ದಾರೆ. ಕಾರ್ಯಕರ್ತೆಯರೇ ಮೊಟ್ಟೆ ಖರೀದಿ ಮಾಡಿ ಕೊಡಬೇಕು. 125 ರೂ. ಪ್ರತಿ ತಿಂಗಳು ನಿಗದಿಪಡಿಸಿದ್ದು, ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಿಗೆ ಇರುವುದರಿಂದ ಖರೀದಿಸಿ ಕೊಡಲಾಗುತ್ತಿಲ್ಲ. ಸಿಲಿಂಡರ್, ಗ್ಯಾಸ್ ದುರಸ್ತಿಯೂ ಮಾಡಿಕೊಟ್ಟಿಲ್ಲ. ಕಾರ್ಯಕರ್ತೆಯರು ಕೈಯಿಂದ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮೊಟ್ಟೆ ವಿತರಣೆ ಅಸಾಧ್ಯ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾತೃಪೂರ್ಣ ಯೋಜನೆಯ ಸಂಪೂರ್ಣ ಅನುಷ್ಠಾನದ ಜವಾಬ್ದಾರಿ ಅಂಗವಾಡಿ ಕಾರ್ಯಕರ್ತೆಯರು ಹಾಗೂ ಬಾಲ ವಿಕಾಸ ಸಮಿತಿ ಮೇಲಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ವಾರಕ್ಕೆ 6 ಮೊಟ್ಟೆ (ತಿಂಗಳಿಗೆ 25), ಮಕ್ಕಳಿಗೆ (3ರಿಂದ 6 ವರ್ಷ) ವಾರಕ್ಕೆ 2 ಮೊಟ್ಟೆಗಳನ್ನು ವಿತರಿಸಬೇಕು. ಇದು ಸಾಧ್ಯವಾಗುತ್ತಿಲ್ಲ.

ಪ್ರತಿ ತಿಂಗಳು ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ. ಯಾವ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಹೋಗಿಲ್ಲ ಎಂಬುದರ ಮಾಹಿತಿ ಇಲ್ಲ. ಕೋವಿಡ್ ಸಂದರ್ಭದಲ್ಲೂ ನಾವು ಆಹಾರ ಧಾನ್ಯ ಪೂರೈಕೆ ಸ್ಥಗಿತಗೊಳಿಸಿಲ್ಲ. | ಹಾಲಪ್ಪ ಆಚಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಅಂಗನವಾಡಿ ಕೇಂದ್ರಗಳಿಗೆ ಆಹಾರ ಧಾನ್ಯ ಪೂರೈಕೆಯಾಗಿಲ್ಲ. ಮೊಟ್ಟೆ ದರ ಹೆಚ್ಚಾಗಿದೆ. ಆದರೂ ಖರೀದಿಸಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಕೊಡಬೇಕು. | ರತ್ನಾ ಶಿರೂರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಸಂಘಟನಾ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net