

ಬೆಳಗಾವಿ: ಗಂಡನ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ದುರಾಸೆಯಿಂದ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಗೋರಾಬಾಳ ಗ್ರಾಮದಲ್ಲಿ ನಡೆದಿದೆ.
ವಿಷಾಹಾರ ಸೇವಿಸಿದ ಗೋರಾಬಾಳ ಗ್ರಾಮದ ನಿಂಗಪ್ಪ ಫಕೀರಪ್ಪ ಹಮಾನಿ(35) ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಘಟನೆಯೂ ಆಗಸ್ಟ್ 11ರಂದು ನಡೆದಿದ್ದು, ನಿಂಗಪ್ಪನ ಪತ್ನಿ ಸಾವಕ್ಕ(32) ಅಂದಿನ ದಿನ ಬೆಳಗ್ಗೆ ತಿಂಡಿಗೆಂದು ಉಪ್ಪಿಟ್ಟು ಮಾಡಿದ್ದರು. ಅದನ್ನು ಸೇವಿಸಿದ ಕೆಲ ಹೊತ್ತಿನ ಬಳಿಕ ನಿಶಕ್ತನಾಗಿ ನಿಂಗಪ್ಪ ಕುಸಿದು ಬಿದ್ದಿದ್ದು ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಯಾರಿಗೂ ಅನುಮಾನ ಬಾರದೆ ಇರಲಿ ಎಂದು ಸಾವಕ್ಕ ಮಾಡಿದ ಅಡಿಗೆಯನ್ನು ಮನೆ ಹಿಂಬದಿಯಲ್ಲಿದ್ದ ತಿಪ್ಪೆಗೆ ಎಸೆದಿದ್ದಳು. ಉಪ್ಪಿಟ್ಟನ್ನು ಸೇವಿಸಿದ ನಾಯಿ ಹಾಗೂ ಬೆಕ್ಕೊಂದು ಮೃತಪಟ್ಟಿದ್ದು, ಇದರಿಂದ ಅನುಮಾನಗೊಂಡು ನಿಂಗಪ್ಪ ತಂದೆ ಫಕೀರಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ನಿಂಗಪ್ಪನ ಪತ್ನಿ ಸಾವಕ್ಕಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆಹಾರಕ್ಕೆ ವಿಷ ಬೆರೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣ ಸಂಬಂಧ ಸಾವಕ್ಕ ಹಾಗೂ ಆಕೆಯ ಸಹೋದರ ಫಕೀರಪ್ಪ ಲಕ್ಷ್ಮಣ ಸಿಂಧೋಗಿ(30) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.