

ಮಂಡ್ಯ: ರೈತರು ತಾವು ಬೆಳೆದಂತಹ ಕೃಷಿ ಉತ್ಪನ್ನಗಳನ್ನು ಯಾವ ರೀತಿ ಮೌಲ್ಯವರ್ಧನೆ ಮಾಡಬೇಕು, ಅದರ ಜೀವಿತಾವಧಿಯನ್ನು ಹೇಗೆ ಹೆಚ್ಚಿಸಬೇಕು ಎಂಬುದನ್ನು ತಿಳಿದುಕೊಂಡರೆ ಉತ್ತಮ ಲಾಭಾಂಶ ಪಡೆಯಬಹುದು ಎಂದು ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ನಬಾರ್ಡ್, ವಿಕಸನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಾರಾಟಗಾರರ-ಖರೀದಿದಾರರ ಸಮ್ಮೇಳನ ಹಾಗೂ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕರ್ನಾಟಕದಲ್ಲಿ ಶೇ.70-75ರಷ್ಟು ಸಣ್ಣ ಹಾಗೂ ಅತಿಸಣ್ಣ ರೈತರಿದ್ದಾರೆ. 10ರಿಂದ 20 ಎಕರೆ ಜಮೀನು ಹೊಂದಿರುವ ರೈತರ ಸಂಖ್ಯೆ ವಿರಳ. ಸರಿಯಾದ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳದಿದ್ದರೆ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ ಎಂದರು.
ರೈತರು ಹೆಚ್ಚು ಸಂಘಟಿತ ಹಾಗೂ ಸದೃಢರಾಗಬೇಕು. ಅವರಿಗೆ ಹೊಸ ತಂತ್ರಜ್ಞಾನ, ಆವಿಷ್ಕಾರಗಳ ಪರಿಚಯ ಮಾಡಿಕೊಡಬೇಕೆಂಬ ಉದ್ದೇಶದಿಂದ ರೈತ ಉತ್ಪಾದನಾ ಸಂಸ್ಥೆಗಳನ್ನು ರಚನೆ ಮಾಡಲಾಗಿದೆ. ಕರ್ನಾಟಕದಲ್ಲಿ 1200 ರೈತ ಉತ್ಪಾದನಾ ಸಂಸ್ಥೆಗಳನ್ನು ರಚನೆ ಮಾಡಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಕೃಷಿ ಉತ್ಪಾದನಾ ಸಂಸ್ಥೆಗಳು ಕರ್ನಾಟಕದಲ್ಲಿವೆ. 10 ಲಕ್ಷಕ್ಕೂ ಹೆಚ್ಚು ರೈತರನ್ನು ಸಂಸ್ಥೆಗಳ ಮೂಲಕ ಸಂಘಟಿಸಲಾಗಿದೆ. ಆರ್ಥಿಕ ವ್ಯವಸ್ಥೆಯಲ್ಲಿ ರೈತರು ತಮಗೆ ಬೇಕಾದಂತಹ ಬಿತ್ತನೆ ಬೀಜ, ಗೊಬ್ಬರ ಅಥವಾ ರಸಗೊಬ್ಬರವನ್ನು ಅಂಗಡಿಗಳಲ್ಲಿ ಖರೀದಿಸುತ್ತಾರೆ. ತಾವು ಬೆಳೆದ ಕೃಷಿ ಉತ್ಪನ್ನವನ್ನು ಅಂಗಡಿಗಳ ಮೂಲಕ ಮಾರಾಟ ಮಾಡುತ್ತಾರೆ. ಖರೀದಿ ಮತ್ತು ಮಾರಾಟ ಎರಡೂ ಸಂದರ್ಭದಲ್ಲಿಯೂ ಸಾರಿಗೆ ವೆಚ್ಚ, ಮಧ್ಯವರ್ತಿಗಳ ವೆಚ್ಚವನ್ನು ಪಾವತಿಸುವ ಏಕೈಕ ವ್ಯಕ್ತಿ ರೈತ. ಇದರಿಂದ ರೈತನಿಗೆ ದೊರಕುವ ಲಾಭ ಕಡಿಮೆಯಾಗುತ್ತದೆ ಎಂದು ಹೇಳಿದರು.
ರೈತ ಉತ್ಪಾದಕ ಸಂಸ್ಥೆಯಲ್ಲಿ ಕೃಷಿ ಪರಿಕರಗಳು ರಿಯಾಯಿತಿ ದರದಲ್ಲಿ ದೊರೆಯುವಂತೆ ಮಾಡಲಾಗಿದೆ. ಸಂಸ್ಥೆ ರಚನೆಯಾದ ಮೇಲೆ ಮಾರುಕಟ್ಟೆಯಲ್ಲಿ ಹಲವಾರು ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಕಡಿಮೆಯಾಗಿದೆ. ರೈತರು ಉದ್ದಿಮೆದಾರರಾಗಬೇಕಾದರೆ ಮಾರುಕಟ್ಟೆಗೆ ಲಗ್ಗೆ ಇಡಬೇಕು. ಖರೀದಿದಾರರಿಗೆ ಬೇಕಿರುವ ರೂಪಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಬೇಕು. ಪ್ರಗತಿಪರ ರೈತರು ಹೆಚ್ಚಿನ ಲಾಭ ಪಡೆಯುತ್ತಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ಅವರನ್ನು ಅನುಸರಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ನಬಾರ್ಡ್ ಪ್ರಾದೇಶಿಕ ಕಚೇರಿಯ ಉಪ ಮಹಾ ಪ್ರಬಂಧಕಿ ದೀಪ ಎಸ್.ಪಿಳ್ಳೈ, ಡಿಡಿಎಂ ಹರ್ಷಿತಾ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಮಂಜುನಾಥ್, ಮಳವಳ್ಳಿಯ ಕಿರು ಮಿಲ್ಲೆಟ್ಸ್ ಮಹೇಶ್, ಕೃಷಿ ಇಲಾಖೆ ಉಪನಿರ್ದೇಶಕಿ ಮಾಲತಿ, ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್‌ಚಂದ್ರ ಗುರು ಇತರರಿದ್ದರು.