ಫುಡ್ ಲೈಸೆನ್ಸ್‌ಗೆ ಏಜೆಂಟ್‌ಗಳ ಕಾಟ

food
Published on

ಹರೀಶ್ ಮೋಟುಕಾನ ಮಂಗಳೂರು

ಆಹಾರೋದ್ಯಮ ಪರವಾನಗಿ ಪಡೆಯುವುದನ್ನು ಸರ್ಕಾರ ಆನ್‌ಲೈನ್ ಮೂಲಕ ಸುಲಭವಾಗಿಸಿದೆ. ಪಾರದರ್ಶಕತೆ ಕಾಯ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಕಾರ್ಯನಿರ್ವಹಿಸಲು ಈ ಪ್ರಕ್ರಿಯೆ ಜಾರಿಗೆ ತರಲಾಗಿದೆ. ಆದರೆ, ನಿಯಮ ಉಲ್ಲಂಘಿಸಿ ಸೈಬರ್ ಸೆಂಟರ್‌ಗಳಲ್ಲಿ ಏಜೆಂಟರು ಮಧ್ಯವರ್ತಿಗಳಂತೆ ಕೆಲಸ ಮಾಡಿ ಸಾರ್ವಜನಿಕರಿಂದ ಹೆಚ್ಚಿನ ಮೊತ್ತ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಬರುತ್ತಿವೆ.

ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರ ಆನ್‌ಲೈನ್‌ನಲ್ಲಿ ಪಡೆಯಲು www.Food licensing and registration system ವೆಬ್‌ಸೈಟ್‌ನಲ್ಲಿ ಆಹಾರೋದ್ಯಮಿಗಳು ವೈಯಕ್ತಿಕ ಹೆಸರಿನಲ್ಲಿ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನಮೂದಿಸಿ ಯೂಸರ್ ಐಡಿ ಪಡೆಯುವುದು ಕಡ್ಡಾಯ. ಆನ್‌ಲೈನ್‌ನಲ್ಲಿ ಬಂದ ಡಿಜಿಟಲ್ ಸಹಿ ಹೊಂದಿರುವ ಆಹಾರ ಪರವಾನಗಿಯನ್ನು ತಾವೇ ಮುದ್ರಿಸಿಕೊಳ್ಳಬೇಕು. ಸೈಬರ್ ಸೆಂಟರ್ ಅಥವಾ ಇನ್ಯಾವುದೇ ವ್ಯಕ್ತಿಗಳ ಹೆಸರಿನಲ್ಲಿ ಯೂಸರ್ ಐಡಿ ಪಡೆಯುವುದರಿಂದ ಲೈಸೆನ್ಸ್‌ನಲ್ಲಿ ತೊಂದರೆ ಎದುರಾದರೆ ಅರ್ಜಿದಾರರೇ ಜವಾಬ್ದಾರರು ಎಂದು ಇಲಾಖೆ ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪರವಾನಗಿ ಪಡೆಯಲು ಚಲನ್ ಮೊತ್ತವನ್ನು ಯಾವುದೇ ಸೈಬರ್ ಸೆಂಟರ್ ಅಥವಾ ಏಜೆಂಟ್‌ಗಳ ಬ್ಯಾಂಕ್ ಖಾತೆಯಿಂದ ಪಾವತಿಸದೆ ಉದ್ಯಮಿಗಳು ತಮ್ಮ ಸ್ವಂತ ಖಾತೆಯಿಂದ ಪಾವತಿಸಬೇಕು. ಇಲಾಖೆಯ ಸರ್ಕಾರಿ ಅಧಿಕಾರಿಗಳ ವೈಯಕ್ತಿಕ ಖಾತೆಯಿಂದಲೂ ಚಲನ್ ಹಣ ಪಾವತಿಸುವಂತಿಲ್ಲ ಎನ್ನುತ್ತದೆ ನಿಯಮ. ಇದರ ಉಲ್ಲಂಘನೆಯಾದರೆ ಭ್ರಷ್ಟಾಚಾರ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು.

ಕೆಲವು ಸೈಬರ್ ಸೆಂಟರ್‌ಗಳಲ್ಲಿ ಪ್ರಾಧಿಕಾರದ ಅಧಿಕಾರಿಗಳಂತೆ ಆಹಾರ ಸುರಕ್ಷತೆ ಪರವಾನಗಿ ತೆಗೆದುಕೊಡುತ್ತಿರುವುದು ಗಮನಕ್ಕೆ ಬಂದಿದೆ. ಆಹಾರೋದ್ಯಮ ನೋಂದಣಿಗೆ 100 ರೂ. ಶುಲ್ಕ. ಆದರೆ, ಸೈಬರ್‌ಗಳಲ್ಲಿ ಇದರ ಬದಲಿಗೆ 1 ಸಾವಿರ ರೂ.ಶುಲ್ಕ ವಸೂಲು ಮಾಡಲಾಗುತ್ತಿದೆ. ಪ್ರಾಧಿಕಾರ ಸೈಬರ್ ಸೆಂಟರ್ ಅಥವಾ ಮಧ್ಯವರ್ತಿಗಳಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿಲ್ಲ. ಅರ್ಜಿದಾರರು ಬ್ಯಾಂಕ್ ಮೂಲಕವೇ ಶುಲ್ಕ ಪಾವತಿಸಬೇಕು. ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ. ಈ ಹಿಂದೆ ಕಚೇರಿಯಿಂದ ಪರವಾನಗಿ ನೀಡುತ್ತಿದ್ದಾಗ ಇಲಾಖೆ ಅಧಿಕಾರಿಗಳೇ ಶಾಮೀಲಾಗಿ ಚಲನ್ ತಿದ್ದಿ ಅರ್ಜಿದಾರರಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಅನುಮತಿ ರದ್ದುಗೊಳಿಸುವ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಆಹಾರೋದ್ಯಮಕ್ಕೆ ಆನ್‌ಲೈನ್‌ನಲ್ಲೇ ಪರವಾನಗಿ ನೀಡಲಾಗುತ್ತಿದೆ. ಮಾಲೀಕರು ಮೊದಲು ಇಲಾಖೆಯನ್ನು ಸಂಪರ್ಕಿಸಿ ತಮ್ಮ ಉದ್ಯಮದ ಬಗ್ಗೆ ಮಾಹಿತಿ ನೀಡಬೇಕು. ನಂತರ ದಾಖಲೆಗಳನ್ನು ಪ್ರತೀ ತಾಲೂಕಿನಲ್ಲಿ ನಿಗದಿಪಡಿಸಿದ ಸೈಬರ್ ಸೆಂಟರ್‌ಗಳಲ್ಲಿ ಅಪ್‌ಲೋಡ್ ಮಾಡಬೇಕು. ಶುಲ್ಕವನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬಹುದು. ದಾಖಲೆಗಳನ್ನು ಸ್ಕಾೃನ್ ಮಾಡಿ ಅಪ್‌ಲೋಡ್ ಮಾಡಬೇಕಿರುವುದರಿಂದ ಒಂದೊಂದು ಉದ್ಯಮಕ್ಕೆ ವಿವಿಧ ತೆರನಾದ ಶುಲ್ಕ ನಿಗದಿ ಮಾಡಲಾಗಿದೆ. ಆದರೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ. ಈ ಬಗ್ಗೆ ದೂರುಗಳು ಬಂದರೆ ಆ ಸೈಬರ್ ಸೆಂಟರ್‌ಗಳಿಗೆ ನೀಡಿರುವ ಅನುಮತಿ ರದ್ದು ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಆಹಾರ ಗುಣಮಟ್ಟ ಕಾಯ್ದೆ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ. ರಿಟೇಲ್ ಅಂಗಡಿಯವರಿಗೆ ದಿನಕ್ಕೆ 3300 ರೂಪಾಯಿಗಿಂತ ಹೆಚ್ಚಿನ ವ್ಯಾಪಾರಕ್ಕೆ 2 ಸಾವಿರ ರೂ, ಇದಕ್ಕಿಂತ ಕಡಿಮೆ ವ್ಯಾಪಾರಕ್ಕೆ 100 ರೂ. ಪಾವತಿಸಬೇಕು. ಆಹಾರ ಉತ್ಪಾದನಾ ಘಟಕಗಳಿಗೆ 1 ಮೆಟ್ರಿಕ್ ಟನ್ ಒಳಗಿದ್ದರೆ 3000 ರೂ, ಇದಕ್ಕಿಂತ ಹೆಚ್ಚಿನ ಉತ್ಪಾದನೆಗೆ 5000 ರೂ. ಶುಲ್ಕ ನಿಗದಿ ಮಾಡಲಾಗಿದೆ.

12 ಲಕ್ಷ ರೂ. ಮೇಲಿದ್ದರೆ ಸ್ಟೇಟ್ ಲೈಸೆನ್ಸ್

ಆಹಾರೋದ್ಯಮಕ್ಕೆ ಅನುಗುಣವಾಗಿ ಲೈಸೆನ್ಸ್ ಪಡೆಯಬೇಕು. ವಾರ್ಷಿಕ ವಹಿವಾಟು 12 ಲಕ್ಷ ರೂ. ಮೇಲೆ ಇದ್ದರೆ ಸ್ಟೇಟ್ ಲೈಸೆನ್ಸ್ ಮತ್ತು 12 ಲಕ್ಷ ರೂ. ಒಳಗೆ ಇದ್ದರೆ ನೋಂದಣಿ ಮಾಡಿದರೆ ಸಾಕು. ನಿಮ್ಮ ಸಂಪೂರ್ಣ ವಿಳಾಸ ಮತ್ತಿತರ ಮಾಹಿತಿ ದಾಖಲಿಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಉದ್ಯಮಕ್ಕೆ 1ರಿಂದ 5 ವರ್ಷಗಳ ಅವಧಿಗೆ ಲೈಸೆನ್ಸ್ ಪಡೆಯಬಹುದು. ಖಜಾನೆ ಚಲನ್ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಏಜೆಂಟರ ಮೋಸಕ್ಕೆ ಬಲಿಯಾಗಬೇಡಿ ಎಂದು ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಆಹಾರೋದ್ಯಮಿಗಳು ಸುಲಭ ವಿಧಾನದಲ್ಲಿ ಪರವಾನಗಿ ಪಡೆಯಬಹುದು. ಪರವಾನಗಿಯು ಆನ್‌ಲೈನ್ ಮೂಲಕವೇ ಕ್ಯೂಆರ್ ಕೋಡ್ ಸಹಿಯಾದ ಬಳಿಕ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ಅರ್ಜಿದಾರರಿಗೆ ತಲುಪುತ್ತದೆ. ಅಧಿಕಾರಿಯ ಸಹಿ ಅಗತ್ಯವಿಲ್ಲ. ಯಾರಾದರೂ ಪರವಾನಗಿ ಮಾಡಿಸಿಕೊಡುತ್ತೇವೆ ಎಂದು ಹೇಳಿ ಹಣ ಕೇಳಿದರೆ, ತಕ್ಷಣ ಮೊಬೈಲ್ ಸಂಖ್ಯೆ 8217749481 ಗೆ ಕರೆ ಮಾಡಿರಿ. ಹೆಚ್ಚಿನ ಮಾಹಿತಿ, ಸಲಹೆ ಬೇಕಾದರೂ ಈ ಸಂಖ್ಯೆಗೆ ಕರೆ ಮಾಡಬಹುದು.

ಡಾ.ಪ್ರವೀಣ್ ಕುಮಾರ್ ಸಿ.ಎಚ್, ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರ, ದ.ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net