ದಸಂಸದಿಂದ ಅಂಧ ಭಿಕ್ಷುಕರಿಗೆ ಆಹಾರ ಕಿಟ್ ವಿತರಣೆ

HUN-MAR-24-5(RATION KIT TO HANDICAPED)
ಹುಣಸೂರಿನ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ನೇತೃತ್ವದಲ್ಲಿ ಮೈಸೂರಿನ ಏಕಲವ್ಯ ನಗರದ 20ಕ್ಕೂ ಹೆಚ್ಚು ಅಂಧರಿಗೆ ಪಡಿತರ ಕಿಟ್ ವಿತರಿಸಲಾಯಿತು. ವೈ.ಕುಮಾರ್, ತೇಜಸ್ವಿನಿ, ಶ್ರೀಧರ್, ಸಿಂಗೇಗೌಡ, ಸಣ್ಣಪ್ಪ, ಪರಮೇಶ್ ಇತರರಿದ್ದರು.
Published on

ಹುಣಸೂರು: ಎರಡು ಕಣ್ಣುಗಳನ್ನು ಕಳೆದುಕೊಂಡು ಭಿಕ್ಷೆ ಬೇಡಿ ಬದುಕು ನಡೆಸುತ್ತಿದ್ದ 20ಕ್ಕೂ ಹೆಚ್ಚು ಅಂಧರಿಗೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಹಾಗೂ ತಂಡ ಅಧಿಕಾರಿಗಳ ಸಹಾಯಹಸ್ತದೊಂದಿಗೆ 50 ಸಾವಿರ ರೂ.ಮೌಲ್ಯದ ಪಡಿತರ ಪದಾರ್ಥಗಳನ್ನು ಇತ್ತೀಚೆಗೆ ವಿತರಿಸಲಾಗಿದೆ.

ಈ ವೇಳೆ ನಿಂಗರಾಜ ಮಲ್ಲಾಡಿ ಮಾತನಾಡಿ, ಮೈಸೂರಿನ ಏಕಲವ್ಯ ನಗರದಲ್ಲಿ ನಿರ್ಗತಿಕರಿಗೆ ದಿನದ ಊಟಕ್ಕೂ ದಾರಿದ್ರ್ಯ ಉಂಟಾಗಿತ್ತು. ಈ ಅಂಗವಿಕಲರು ರಸ್ತೆ ಬದಿಗಳಲ್ಲಿ ಭಿಕ್ಷಾಟನೆ ಮಾಡುವಾಗ ಅಪಘಾತಗಳು ಸಂಭವಿಸುತ್ತಿದ್ದವು. ಇವರಿಗೆ ಸರ್ಕಾರದ ಮಾಸಾಶನ ಸಾಕಾಗುತ್ತಿಲ್ಲ. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಭಿಕ್ಷೆ ಬೇಡುತ್ತಿದ್ದರು. ಕೂಡಲೇ ಸರ್ಕಾರ ಅಂಗವಿಕಲರಿಗೆ ಜೀವನ ನಿರ್ವಹಣೆಗಾಗಿ ದಿನಕ್ಕೆ ನೂರು ರೂ.ಗಳಂತೆ ತಿಂಗಳಿಗೆ ಮೂರು ಸಾವಿರ ರೂ. ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.

ದಸಂಸ ಮತ್ತು ಅಲೆಮಾರಿ ಸಂಘ ಇವರ ಸ್ಥಿತಿಗತಿಗಳನ್ನು ಮೈಸೂರಿನ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿಶೇಷ ಅಧಿಕಾರಿ ವೆಂಕಟರಾಜು ಬಳಿ ಆಹಾರದ ಕಿಟ್‌ಗಳನ್ನು ಅಂಗವಿಕಲರಿಗೆ ನೀಡುವಂತೆ ಮಾಡಿದ್ದ ಮನವಿಗೆ ಸ್ಪಂದಿಸಿದ್ದಾರೆ. ವೈಯಕ್ತಿಕ ಖರ್ಚಿನಿಂದ ಎರಡು ತಿಂಗಳಿಗೆ ಸಾಕಾಗುವಷ್ಟು ಪಡಿತರ ಪದಾರ್ಥಗಳನ್ನು ನೀಡಿದ್ದಾರೆ. ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದ ಅವರಿಗೆ ಧನ್ಯವಾದಗಳು ಎಂದರು.

ಅಲೆಮಾರಿ/ ಅರೆ ಅಲೆಮಾರಿ ಸಂಘಗಳ ರಾಜ್ಯಾಧ್ಯಕ್ಷ ವೈ. ಕುಮಾರ್ ಮಾತನಾಡಿ, ಅಂಗವಿಕಲರನ್ನು ಸಮಾಜ ಪ್ರೀತಿ, ಗೌರವದಿಂದ ಕಾಣುವಂತಾಗಬೇಕು. ಅವರ ಕಷ್ಟ ನೋವುಗಳಿಗೆ ಕೈಲಾಗುವ ಮಟ್ಟಿಗೆ ಸ್ಪಂದಿಸುವ ಗುಣ ಮೈಗೂಡಿಸಿಕೊಂಡು ನೆರವಾಗಬೇಕು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿಂಗೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಸಣ್ಣಪ್ಪ, ಪ್ರಾಧ್ಯಾಪಕ ಪರಮೇಶ್, ಏಕಲವ್ಯ ಗ್ರಾಪಂ ಸದಸ್ಯೆ ತೇಜಸ್ವಿನಿ ಶ್ರೀಧರ್, ನಂದನ್ ಕುಮಾರ್, ನವೀನ, ಕಿರಣ, ಸತೀಶ, ರಮೇಶ, ಅಂಗವಿಕಲರ ಸಂಘದ ಅಧ್ಯಕ್ಷ ಕೆರೆಯೂರು ಶಿವಶೆಟ್ಟರು, ತಿಮ್ಮರಾಯಪ್ಪ, ಕುಮಾರ, ಹರೀಶ, ರಂಗಮ್ಮ, ನಾಗರತ್ನಮ್ಮ, ಜಮುನಾ, ಅಂಬಿಕಾ, ಕಾವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net