

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದಾನಿಗಳ ಸಹಕಾರದೊಂದಿಗೆ ಮದ್ದಡ್ಕದ ಸಮಾಜಸೇವಕ ಅಬ್ಬೋನು ಮದ್ದಡ್ಕ ನಿವಾಸದಲ್ಲಿ ಅರ್ಹ ಕುಟುಂಬಗಳಿಗೆ ರಮಜಾನ್ ಆಹಾರದ ಕಿಟ್ ವಿತರಣೆ, ಝಕಾತ್ ದಾನ ನಿಧಿ, ಚಿಕಿತ್ಸೆಗೆ ಧನಸಹಾಯ, ಶೈಕ್ಷಣಿಕ ನಿಧಿ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ನಡೆಯಿತು.
ಮಂಗಳೂರು ಇಂಡಿಯನ್ ಆಸ್ಪತ್ರೆ ಚೇರ್‌ಮನ್, ಖ್ಯಾತ ಹೃದಯರೋಗ ತಜ್ಞ ಡಾ.ಯೂಸುಫ್ ಕುಂಬ್ಲೆ ಅವರ ತಾಯಿಯ ಹೆಸರಿನಲ್ಲಿರುವ ಫಾತಿಮಾ ಹೆಲ್ತ್ ಫೌಂಡೇಷನ್ ವತಿಯಿಂದ ರಮಜಾನ್ ಆಹಾರ ಕಿಟ್ ಹಸ್ತಾಂತರಿಸಲಾಯಿತು.
ಜಮೀಯತುಲ್ ಫಲಾಹ್ ಉಡುಪಿ ದ.ಕ ಘಟಕ ಪೂರ್ವ ಜಿಲ್ಲಾಧ್ಯಕ್ಷ, ಹಿರಿಯ ಸಾಮಾಜಿಕ ಮುತ್ಸದ್ದಿ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ವತಿಯಿಂದ 30 ಕುಟುಂಬಗಳಿಗೆ ಜಕಾತ್ ದಾನ ವಿತರಿಸಲಾಯಿತು.
ಹೊಟೇಲ್‌ನಲ್ಲಿ ಕೂಲಿ ಕಾರ್ಮಿಕನಾಗಿದ್ದರೂ, ತನ್ನ ಮೂವರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡುತ್ತಿರುವ ಕುಟುಂಬಕ್ಕೆ ಅಬ್ಬೋನು ಮದ್ದಡ್ಕ ಫ್ಯಾಮಿಲಿ ವತಿಯಿಂದ ಶೈಕ್ಷಣಿಕ ನಿಧಿ ಹಸ್ತಾಂತರ, ಮೂರು ಮಂದಿ ತೀರಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಫಲಾನುಭವಿಗಳಿಗೆ ಚಿಕಿತ್ಸಾ ವೆಚ್ಚ ನೀಡಲಾಯಿತು.
ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಒಕ್ಕೆತ್ತೂರು ಮಸ್ಜಿದ್ ಧರ್ಮಗುರು ರಫೀಕ್ ಅಹ್ಸನಿ, ಮಲ್‌ಜಅ ಪ್ರಾರ್ಥನಾ ಸಮ್ಮೇಳನ ಸ್ವಾಗತ ಸಮಿತಿ ಚೇರ್‌ಮನ್ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ, ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಶ್ರಫ್ ಚಿಲಿಂಬಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಎಂ.ಎಚ್.ಅಬೂಬಕ್ಕರ್, ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಅಧ್ಯಕ್ಷ ಎಂ.ಎಚ್.ಹಸನಬ್ಬ,ಹಿರಿಯರು ಪುತ್ತಾಕ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.