ರೋಗ ನಿಯಂತ್ರಣಕ್ಕೆ ಆಹಾರವೇ ಔಷಧ

17 Jaggu 9
Published on

ಧಾರವಾಡ: ಭಯಾನಕ ರೋಗಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ನಾವು ತಿನ್ನುವ ಆಹಾರವನ್ನೇ ಔಷಧವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಆಹಾರ ತಜ್ಞೆ ಡಾ.ಚಾರುಲತಾ ಮೆಳವಂಕಿ ಹೇಳಿದರು.

ನಗರದ ನೌಕರರ ಭವನದಲ್ಲಿ ಧಾರವಾಡ ಜರ್ನಲಿಸ್ಟ್ ಗಿಲ್ಡೃ್ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತರ ಕುಟುಂಬ ಮಿಲನ ಮತ್ತು ‘ಆಹಾರ ವೇ ಔಷಧಿ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಆರೋಗ್ಯ ಸಂಪತ್ತಿನ ಮಹತ್ವ ತಿಳಿಯುತ್ತಿಲ್ಲ. ನಮಗೆ ಪ್ರಕೃತಿ ನೀಡಿದ ಅಮೂಲ್ಯ ಆರೋಗ್ಯ ಸಂಪತ್ತಿಗಿಂತ ಅರ್ಧರಾತ್ರಿವರೆಗೂ ದುಡಿಯುವ ಉದ್ಯೋಗವೇ ಶ್ರೇಷ್ಠ ಎನ್ನುವ ಮನೋಭಾವ ಬರುತ್ತಿದೆ. ಇದರಿಂದಾಗಿ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಅನೇಕ ಮಾರಕ ರೋಗಗಳು ಆವರಿಸುತ್ತಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಮಾತನಾಡಿ, ಪತ್ರಕರ್ತರ ಜೀವನ ಸದಾ ಒತ್ತಡದಲ್ಲಿರುತ್ತದೆ. ಹೀಗಾಗಿ ಜೀವನ ಶೈಲಿ ಸುಧಾರಿಸಿಕೊಂಡು ಆಹಾರವೇ ಔಷಧವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ಯಾಹಾರ ತಜ್ಞೆ ಡಾ.ರಾಜೇಶ್ವರಿ ನವಲೂರ ಮಾತನಾಡಿ, ಅಡುಗೆ ಮನೆಯೇ ನಮ್ಮ ಔಷಧಾಲಯವಾಗಬೇಕು. ಅಲ್ಲಿ ಲಭಿಸುವ ಅರಿಷಿಣ, ಜೀರಿಗೆ, ಶುಂಠಿ, ಬೆಳ್ಳುಳ್ಳಿಯೇ ನಮಗೆ ಔಷಧವಾಗಬೇಕು ಎಂದರು.

ಉದರ ಜೀವಾಣುಗಳ ಉಪಯೋಗ ಕುರಿತು ಮಾತನಾಡಿದ ಡಾ.ಚಿನ್ಮಯಿ ಮೆಳವಂಕಿ, ಒತ್ತಡದ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಖುಷಿಯಿಂದ ಬದುಕುವುದನ್ನು ಕಲಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜರ್ನಲಿಸ್ಟ್ ಗಿಲ್ಡೃ್ ಅಧ್ಯಕ್ಷ ಡಾ.ಬಸವರಾಜ ಹೊಂಗಲ್ ಮಾತನಾಡಿದರು. ಉಪಾಧ್ಯಕ್ಷ ಬಸವರಾಜ ಅಳಗವಾಡಿ ಇದ್ದರು. ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ಗಿಲ್ಡೃ್ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net