

ಜಯಪುರ (ಕೊಪ್ಪ ತಾ.): ಆಹಾರ ಇಲಾಖೆ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ಎರಡು ವಾರಗಳಿಂದ ಪಡಿತರ ಪಡೆಯಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಉಂಟಾಗಿದೆ. ಕಾರ್ಡದಾರರು ನ್ಯಾಯಬೆಲೆ ಅಂಗಡಿ ಎದುರು ದಿನವಿಡೀ ಕಾದು ಪಡಿತರ ಸಿಗದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ವಾಪಸಾಗುತ್ತಿದ್ದಾರೆ.
ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮ ತಡೆಯಲು ಲೆಡ್ಜರ್ ವಿತರಣಾ ವ್ಯವಸ್ಥೆಗೆ ಬದಲಾಗಿ ಬಯೋಮೆಟ್ರಿಕ್ ಪದ್ಧತಿಯಲ್ಲಿ ಕಾರ್ಡದಾರರ ಹೆಬ್ಬೆರಳ ಗುರುತು ಪಡೆದು ಆಹಾರ ಧಾನ್ಯ ವಿತರಿಸುವ ವ್ಯವಸ್ಥೆ ತಂದಿದೆ. ಆದರೆ ಪೂರಕವಾದ ತಾಂತ್ರಿಕ ವ್ಯವಸ್ಥೆ ರೂಪಿಸದ ಕಾರಣ ಸರ್ವರ್ ಮೇಲೆ ಒತ್ತಡ ಬಿದ್ದು ಪದೇಪದೆ ಕೈಕೊಡುತ್ತಿದೆ. ಇದರಿಂದ ಪಡಿತರ ವಿತರಿಸಲು ನ್ಯಾಯಬೆಲೆ ಅಂಗಡಿ ಮಾಲೀಕರು ಪರದಾಡುತ್ತಿದ್ದಾರೆ.
ಸರ್ವರ್ ನಿಧಾನವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ದಿನಕ್ಕೆ 10ರಿಂದ 15 ಕಾರ್ಡದಾರರಿಗೆ ಮಾತ್ರ ಪಡಿತರ ವಿತರಿಸಲು ಸಾಧ್ಯವಾಗುತ್ತಿದೆ. ಬಡವರು, ಕೂಲಿ ಕಾರ್ವಿುಕರು ದೈನಂದಿನ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಕಾಯುವ ಸ್ಥಿತಿ ಎದುರಾಗಿದೆ. ಮಲೆನಾಡಲ್ಲಿ ಮಳೆಯಿಂದ ಅರ್ಧಕ್ಕೆ ನಿಂತಿದ್ದ ಕಾಫಿ, ಭತ್ತ ಕೊಯ್ಲು ಮತ್ತೆ ಆರಂಭವಾಗಿದೆ. ಕಾರ್ವಿುಕರು ಪಡಿತರ ಪಡೆಯಲು ಪ್ರತಿದಿನ ನ್ಯಾಯಬೆಲೆ ಅಂಗಡಿಗೆ ತೆರಳುತ್ತಿರುವ ಕಾರಣ ಕಾರ್ವಿುಕರಿಲ್ಲದೆ ಬೆಳೆಗಾರರಿಗೂ ತೊಂದರೆಯಾಗಿದೆ. ಕೂಡಲೇ ಆಹಾರ ಇಲಾಖೆ ಅಧಿಕಾರಿಗಳು ಸರ್ವರ್ ಸಮಸ್ಯೆ ಬಗೆಹರಿಸಬೇಕಿದೆ.
ಉಳಿದಿರುವುದು ಹತ್ತೇ ದಿನ: ಕೊಪ್ಪ ತಾಲೂಕಿನಲ್ಲಿ ಒಟ್ಟು 16,284 ಕಾರ್ಡದಾರರಿದ್ದಾರೆ. ಜ.6ರಂದು ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆರಂಭವಾಗಿದೆ. ಸರ್ವರ್ ಸಮಸ್ಯೆಯಿಂದಾಗಿ 15 ದಿನಗಳಲ್ಲಿ ಕೇವಲ 6,329 ಮಂದಿ ಪಡಿತರ ಪಡೆಯಲು ಸಾಧ್ಯವಾಗಿದೆ. ಉಳಿದ 10ದಿನಗಳಲ್ಲಿ 9,955 ಕಾರ್ಡದಾರರು ಪಡಿತರ ಪಡೆಯಬೇಕಾಗಿದೆ.
ಎರಡು ವಾರಗಳಿಂದಾಗಿರುವ ಪಡಿತರ ವಿತರಣೆಯಲ್ಲಿನ ಅವ್ಯವಸ್ಥೆ ಗಮನಕ್ಕೆ ಬಂದಿದೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಹೆಚ್ಚಿನ ಸರ್ವರ್ ಅಳವಡಿಸಿ ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಹಾರ ಇಲಾಖೆ ಶಿರಸ್ತೇದಾರ ಶ್ರೀಕಾಂತ ಎಸ್.ಎನ್. ಭರವಸೆ ನೀಡಿದರು.