

ಶಿವಮೊಗ್ಗ: ನಿರ್ಗತಿಕರಿಗೆ ಕೂಡ ಅನ್ನ ಸುವಿಧ ಯೋಜನೆ ಅಡಿ ಆಹಾರ ನೀಡಲಾಗುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ 200 ನಿರ್ಗತಿಕರಿಗೆ ಆಹಾರ ನೀಡಲಾಗುತ್ತಿದೆ. ಒನ್ ರೇಷನ್ ಒನ್ ಕಾರ್ಡ್ ಯೋಜನೆ ಅಡಿ ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರು ಮತ್ತು ನಾಗರಿಕರಿಗೆ ಕೂಡ ತಕ್ಷಣ ರೇಷನ್ ಕಾರ್ಡ್ ನೀಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲವಿದ್ದು, ಕಾರ್ಡ್ ನೀಡಲು ನಿರಾಕರಿಸುತ್ತಾರೆಂಬ ಆರೋಪಗಳಿವೆ. ಆದರೆ ಅಂಥವರಿಗೆ ಕೂಡಲೇ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ 3.81 ಲಕ್ಷ ಬಿಪಿಎಲ್ ಕಾರ್ಡ್‌ಗಳಿದ್ದು 17 ಲಕ್ಷ ಗ್ರಾಹಕರಿದ್ದಾರೆ. ಸಕಾಲಕ್ಕೆ ಪಡಿತರ ನೀಡುತ್ತಿದ್ದು, ಜಿಲ್ಲೆಯಲ್ಲಿ 6,200 ಬಿಪಿಎಲ್ ಕಾರ್ಡ್‌ಗಳು ಅನರ್ಹಗೊಂಡಿವೆ. ಅವರಿಗೆ ಎಪಿಎಲ್ ಕಾರ್ಡ್ ನೀಡಲಾಗುವುದು. ತೂಕ ಮತ್ತು ಅಳತೆ ಅಧಿಕಾರಿಗಳಿಗೆ ಸಂಶಯ ಬಂದ ಖಾಸಗಿ ಗೋದಾಮುಗಳಲ್ಲೂ ಪಡಿತರ ಅಕ್ಕಿ ಇರುವ ಮಾಹಿತಿ ಸಿಕ್ಕರೆ ದಾಳಿ ನಡೆಸುವ ಅಧಿಕಾರ ಇಲಾಖೆ ಅಧಿಕಾರಿಗಳಿಗೆ ಇದೆ ಎಂದರು.
ನವೆಂಬರ್ ಕ್ರಾಂತಿಗೆ ಉತ್ತರಿಸಲಾರೆ
ನವೆಂಬರ್ ಕ್ರಾಂತಿ ಮತ್ತು ಸಂಪುಟ ವಿಸ್ತರಣೆ ಬಗ್ಗೆ ನಾನು ಉತ್ತರ ಕೊಡುವುದಿಲ್ಲ. ನನ್ನಿಂದ ನೀವು (ಮಾಧ್ಯಮ) ಬಾಯಿ ಬಿಡಿಸಬೇಡಿ. ನಾನು ಯಾವ ಕಾರಣಕ್ಕೂ ನಿಮ್ಮ ಪ್ರಶ್ನೆಗೆ ಉತ್ತರಿಸುವುದಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡಲಿದ್ದು, ಕಾದು ನೋಡಿ ಎಂದು ಸಚಿವ ಕೆ.ಎಚ್.ಮುನಿಯಪ್ಪ ಜಾರಿಕೊಂಡರು.