

ಹಾಸನ: ಶಾಲೆಗಳ ಹಂತದಲ್ಲಿ ಆಹಾರ ಮೇಳವನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ವ್ಯವಹಾರದ ಜ್ಞಾನ ನೀಡುವ ಶಾಲೆಗಳ ಉದ್ದೇಶ ಸಫಲತೆ ಕಾಣಲಿ ಎಂದು ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜವರೇಗೌಡ ಆಶಿಸಿದರು.
ಹೊಳೆನರಸೀಪುರ ಪಟ್ಟಣದ ಕೆಎನ್‌ಎ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ದೈನಂದಿನ ಪಠ್ಯಗಳನ್ನು ಹೊರತುಪಡಿಸಿ ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಇರುವುದರಿಂದ ಅವರಲ್ಲಿ ಸಾಮಾಜಿಕ ಜ್ಞಾನ ಬೆಳವಣಿಗೆ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.
ಈ ಶಾಲೆಯ ಆಡಳಿತ ಮಂಡಳಿ ತಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಯ ಜತೆಗೆ ಪಠ್ಯೇತರ ಚಟುವಟಿಕೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಪ್ರಶಂಸಿಸಿದರು.
ಇತ್ತೀಚೆಗೆ ಮಕ್ಕಳನ್ನು ಆವರಿಸಿಕೊಂಡಿರುವ ಮೊಬೈಲ್ ಸಂಸ್ಕೃತಿ ಅವರ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ. ಅಲ್ಲದೆ, ನಮ್ಮ ಸಂಸ್ಕೃತಿ, ಆಚಾರ-ವಿಚಾರ ಮರೆತು ಹೋಗುತ್ತಿದ್ದಾರೆ. ಹಾಗಾಗಿ, ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಬೆಳೆಸುವುದು ಕೂಡ ಶಿಕ್ಷಕರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಶ್ರಮ ಹಾಕುತ್ತಿರುವುದು ಉತ್ತಮ ಸಂಪ್ರದಾಯ ಎಂದರು.
ಶ್ರೀವಾಸವಾಂಬ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಎನ್. ಗೌತಮ್ ಮಾತನಾಡಿ, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ತಮ್ಮ ದೈನಂದಿನ ಓದಿನ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಾಲೆಗೆ ಮತ್ತು ಪಾಲಕರಿಗೆ ಒಳ್ಳೆಯ ಹೆಸರು ತರಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ವೆಂಕಟೇಶಬಾಬು ಮಾತನಾಡಿ, ನಮ್ಮ ಶಾಲೆಯಲ್ಲಿ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾರತೀಯ ಸಂಸ್ಕೃತಿಯನ್ನು ಕಲಿಸುವಲ್ಲಿ ಶಿಕ್ಷಕರು ಮುಂದಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀವಾಸವಾಂಬ ಕೋ-ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷ ಎನ್. ಸುಭಾಷ್, ವಿ.ಎ.ಕೃಷ್ಣ ಇತರರು ಇದ್ದರು.