ನ.1ರಿಂದ ಬೈಂದೂರು ಉತ್ಸವ

gururaj gantiholi
ಶಾಸಕ ಗುರುರಾಜ್ ಗಂಟಿಹೊಳೆ
Published on

ಬೈಂದೂರು: ವಿಶಾಲವಾದ ಪಶ್ಚಿಮಘಟ್ಟ ಹಾಗೂ ಕರಾವಳಿಯ ಕಡಲತೀರ ಪ್ರದೇಶವನ್ನೊಳಗೊಂಡಿರುವ ಬೈಂದೂರು ಕ್ಷೇತ್ರ ಪ್ರಾಕೃತಿಕವಾಗಿ ಕಂಗೊಳಿಸುತ್ತಿದೆ. ಇಲ್ಲಿನ ಸೌಂದರ್ಯ ಹಾಗೂ ಮಾನವಶಕ್ತಿ ಪ್ರಪಂಚಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ನ.1ರಿಂದ 3ರವರೆಗೆ ಬೈಂದೂರು ಉತ್ಸವ ನಡೆಸಲಾಗುತ್ತಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಉತ್ಸವದಲ್ಲಿ ಆಹಾರ ಮೇಳ, ಕೃಷಿ, ಮೀಗಾರಿಕಾ ಮೇಳ, ವಿಜ್ಞಾನ, ವಸ್ತುಪ್ರದರ್ಶನ, ಕೃತಕ ಅರಣ್ಯ ಲೋಕ ಸೃಷ್ಟಿಸುವುದು ಸೇರಿದಂತೆ ಹಲವು ಗೋಷ್ಠಿಗಳು ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಬೈಂದೂರಿನ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನ ಮಂಥನ ನಡೆಸುವುದಲ್ಲದೇ, ಇಲ್ಲಿನ ಪ್ರಮುಖ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಮಾತನಾಡಿ, ಉತ್ಸವದ ಮೂಲಕ ಕ್ಷೇತ್ರದ ಅಭಿವೃದ್ಧಿ ನೆಲೆಯಲ್ಲಿ ಜಾಗತಿಕ ಹೂಡಿಕೆಯನ್ನು ಸೆಳೆಯುವ ಪ್ರಯತ್ನ, ಇಲ್ಲಿನ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಸಮರ್ಪಕ ವೇದಿಕೆ ಕಲ್ಪಿಸಿಕೊಡುವ ಕೆಲಸ ಮಾಡಲಾಗುವುದು. ಕೃಷಿ, ಮೀನುಗಾರಿಕೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಮಾಹಿತಿ ಒದಗಿಸಿ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲಾಗುವುದು ಎಂದರು.

ಬೈಂದೂರು ಉತ್ಸವ ಸಂಚಾಲಕ ಶ್ರೀ ಗಣೇಶ ಉಪ್ಪುಂದ, ಜಯಾನಂದ ಹೋಬಳಿದಾರ್, ಗಾಯಾಡಿ ಗೋಕುಲ್ ಶೆಟ್ಟಿ, ಗೌರಿ ದೇವಾಡಿಗ, ತಂಗಪ್ಪನ್, ಮಂಜುನಾಥ ಪೂಜಾರಿ ಸಸಿಹಿತ್ಲು, ಅನಿತಾ ಆರ್.ಕೆ., ಭಾಗೀರಥಿ ಸುರೇಶ್, ಸುರೇಂದ್ರ ಖಾರ್ವಿ, ಪುಷ್ಪರಾಜ್ ಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net