ಬನ್ನೂರು: ಪಟ್ಟಣದ ಸಂತೆಮಾಳದಲ್ಲಿರುವ ಶ್ರೀ ನಂದಿಬಸವೇಶ್ವರಸ್ವಾಮಿ ಮಹಾದ್ವಾರದ 5ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನ.10 ರಂದು ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಸಂತೆಮಾಳದಲ್ಲಿ 2ನೇ ಧರ್ಮಸ್ಥಳ ಎಂದೇ ಖ್ಯಾತವಾಗಿರುವ ಬೀಡನಹಳ್ಳಿ ಬಸವನ ದೇವಾಲಯದ ಮಾರ್ಗಕ್ಕೆ ಸಂತೆಮಾಳದಲ್ಲಿ ನಿರ್ಮಾಣವಾಗಿರುವ ಮಹಾದ್ವಾರಕ್ಕೆ 5 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳಿಗೆ ಬೀಡನಹಳ್ಳಿಯ ನಂದಿಬಸವೇಶ್ವರ, ಚಿಕ್ಕರಸಿನಕೆರೆಯ ಕಾಲಬೈರವೇಶ್ವರ, ಹಂಗರಹಳ್ಳಿಯ ವಿದ್ಯಾಡೇಶ್ವರಿ, ಗೌಡಗೆರೆಯ ಚಾಮುಂಡೇಶ್ವರಿ, ಯೆಡಹಳ್ಳಿಯ ಸಿದ್ದೇಶ್ವರ ಸ್ವಾಮಿ, ಕೊತ್ತತ್ತಿಯ ಭೂಮಿ ಸಿದ್ದೇಶ್ವರಸ್ವಾಮಿ, ಮಲಿಯೂರು ಬೀರೇಶ್ವರಸ್ವಾಮಿ, ಬೆಟ್ಟಳ್ಳಿಯ ಒಡ್ಗಲ್ಲು ರಂಗನಾಥಸ್ವಾಮಿ, ನೂನಗಹಳ್ಳಿಯ ವರದರಾಜಸ್ವಾಮಿ ಅವರಿಂದ ಬಸವಗಳು ಆಗಮಿಸುತ್ತಿದ್ದು, ಹೋಮದ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8.30ಕ್ಕೆ ರತ್ನ ಮಾಂಗಲ್ಯ ಸಾಮಾಜಿಕ ನಾಟಕ ಏರ್ಪಡಿಸಲಾಗಿದೆ. ಸಂತೆಮಾಳದಿಂದ ಬೀಡನಹಳ್ಳಿಯ ನಂದಿಬಸವೇಶ್ವರ ದೇವಾಲಯದವರೆಗೆ ಸುಮಾರು 1.5 ಕಿಮೀ ರಸ್ತೆಗೆ ವಿದ್ಯುತ್‌ದೀಪ ಅಲಂಕಾರ ಮಾಡಲಾಗಿದೆ. ಸುತ್ತಮುತ್ತಲ ಗ್ರಾಮಗಳಿಂದ ಎಲ್ಲ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುವಂತೆ ಮುಖಂಡರು ಮನವಿ ಪತ್ರಿಕಾ ಹೇಳಿಕೆಯಲ್ಲಿ ಮಾಡಿದ್ದಾರೆ.