

ಹೊಸಕೋಟೆ : ಲಾಕ್‌ಡೌನ್ ಜಾರಿಯಾದಾಗಿನಿಂದ ಅದೆಷ್ಟೋ ಜನರು ಎರಡು ಹೊತ್ತು ಊಟಕ್ಕಾಗಿ ಪರಿತಪಿಸುತ್ತಿದ್ದು, ಅಂತಹವರ ಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ ಎಂದು ಪೌರಾಡಳಿತ ಹಾಗೂ ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ ಪ್ರಾರಂಭಿಸಿರುವ ಮಂಜುನಾಥ ಅನ್ನ ಕುಟೀರದಲ್ಲಿ ಭಾನುವಾರ 2000 ಜನರಿಗೆ ಬಿರಿಯಾನಿ ಪೊಟ್ಟಣ ವಿತರಿಸಿ ಮಾತನಾಡಿದರು. ಜನತೆ ಕೈಯಲ್ಲಿ ಹಣವಿಲ್ಲದೆ, ಉದ್ಯೋಗವಿಲ್ಲದೆ ಕಂಗಾಲಾಗಿದ್ದು, ಇಂತಹ ಸಾವಿರಾರು ಮಂದಿ ಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು, ಅನಾಥರು, ವಾಹನ ಚಾಲಕರಿಗೆ ಪ್ರತಿನಿತ್ಯ ಹಸಿವು ನೀಗಿಸುವ ಉದ್ದೇಶದಿಂದ ಮಂಜುನಾಥ ಅನ್ನ ಕುಟೀರ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಪ್ರತಿನಿತ್ಯ ಸಸ್ಯಹಾರಿ ಊಟ ನೀಡಲಾಗುತ್ತಿದೆ. ಭಾನುವಾರ ಬಿರಿಯಾನಿ ನೀಡಿದ್ದು, ಲಾಕ್‌ಡೌನ್ ಮುಗಿಯುವರೆಗೂ ಪ್ರತಿನಿತ್ಯ ಇಲ್ಲಿ ಅಹಾರದ ಪೊಟ್ಟಣ ವಿತರಿಸುವುದಾಗಿ ತಿಳಿಸಿದರು. ಈಗಾಗಲೇ ತಾಲೂಕಿನಾದ್ಯಂತ 15 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್ ವಿತರಿಸಲಾಗಿದೆ. ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಔಷಧ ಕಿಟ್ ನೀಡಲಾಗಿದೆ ಎಂದರು.
ಲಾಕ್‌ಡೌನ್ ಮುಂದುವರಿಸಿ: ಈಗ ಘೋಷಣೆ ಯಾಗಿರುವಂತೆ ಜೂ.14ರವರೆಗೆ ಲಾಕ್‌ಡೌನ್ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಅವಸರದಲ್ಲಿ ಅನ್‌ಲಾಕ್ ಮಾಡಬಾರದು, ಈ ಬಗ್ಗೆ ಖುದ್ಧಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜತೆ ಮಾತನಾಡಿದ್ದೇನೆ. ಈಗ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. 14ರ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮತೆಗೆದುಕೊಳ್ಳುವಂತೆ ಕೋರಿರುವುದಾಗಿ ಸಚಿವರು ತಿಳಿಸಿದರು. ನಗರಸಭಾ ಸದಸ್ಯರಾದ ನಿತಿನ್ ಶ್ರೀನಿವಾಸ್, ನವೀನ್, ಮುಖಂಡರಾದ ರಾಜಶೇಖರ್, ಅಫ್ಸರ್ ಇದ್ದರು.
ಅಧಿಕಾರಿಗಳ ಕಿತ್ತಾಟ ಸಲ್ಲ : ಮೈಸೂರಿನ ಜಿಲ್ಲಾಧಿಕಾರಿ ಮತ್ತು ನಗರ ಪಾಲಿಕೆ ಆಯುಕ್ತರ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕರೊನಾ ಸಂದರ್ಭದಲ್ಲಿ ಜನತೆಯ ರಕ್ಷಣೆ ಮಾಡಬೇಕಾದ ಅಧಿಕಾರಿಗಳು, ಪ್ರತಿಷ್ಠೆಗಾಗಿ ಪರಸ್ಪರ ಅರೋಪ ಮಾಡಿಕೊಂಡು ಕಿತ್ತಾಡಿದ್ದು ಸರಿಯಿಲ್ಲ. ಇದರಿಂದ ಸರ್ಕಾರಕ್ಕೆ ಮುಜುಗರ ಆಗುತ್ತದೆ. ಅಂಥ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ತಕ್ಕಪಾಠ ಕಲಿಸಿದಂತೆ ಆಗಿದೆ. ಮುಂದೆ ಇಂಥ ವರ್ತನೆ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗದುಕೊಳ್ಳಬೇಕು ಎಂದು ತಿಳಿಸಿದರು.