ಕೋತಿಗಳಿಗೆ ಕೈತುತ್ತು ನೀಡುವ ರುಕ್ಮಿಣಮ್ಮ ; 20 ವರ್ಷಗಳಿಂದ ವಾನರ ಸೈನ್ಯಕ್ಕೆ ಹಣ್ಣು, ಬಿಸ್ಕತ್ತು, ಬ್ರೆಡ್ ವಿತರಣೆ

24 MDG 03
Published on

ಮಧುಗಿರಿ : ಕೋತಿಗಳು ಮನೆಯ ಸಮೀಪ ಬಂದಾಗ ಕೆಲವರು ಮನೆಯಲ್ಲಿರುವ ಹಣ್ಣು ಹಂಪಲು ಕೊಟ್ಟು ಸಾಗ ಹಾಕುವುದು ಸಾಮಾನ್ಯ. ಆದರೆ ಇಲ್ಲೊಬ್ಬರು 20 ವರ್ಷಗಳಿಂದ ಕೋತಿಗಳಿಗೆ ಆಹಾರ ನೀಡುತ್ತಿದ್ದಾರೆ.

ಕೋಡಗದಾಲ ಗ್ರಾಪಂ ವ್ಯಾಪ್ತಿಯ ನಾಗಮ್ಮನ ಪಾಳ್ಯದ ನಿವಾಸಿ ದಿ.ಶಿಕ್ಷಕ ಸುಬ್ಬಣ್ಣ ಅವರ ಪತ್ನಿ ರುಕ್ಮಿಣಮ್ಮ (72) ಇಳಿ ವಯಸ್ಸಿನಲ್ಲೂ ಕೋತಿಗಳು ಮತ್ತು ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.

ಪ್ರತೀ ದಿನ ಸಂಜೆ 5 ಗಂಟೆಗೆ ಗ್ರಾಮದ ಪ್ರಾಥಮಿಕ ಶಾಲೆಯ ಗೇಟಿನ ಮುಂದೆ ಬ್ಯಾಗುಗಳ ತುಂಬೆಲ್ಲ ಆಹಾರ, ಹಣ್ಣುಗಳನ್ನು ಹೊತ್ತು ಹಾಜರಾಗುತ್ತಾರೆ. ಇವರು ಬರುವುದನ್ನೇ ಕಾಯುತ್ತಿರುವ ಕೋತಿಗಳು ಮತ್ತು ಬೀದಿ ನಾಯಿಗಳು ಪ್ರೀತಿಯಿಂದ ರುಕ್ಮಿಣಮ್ಮ ಅವರನ್ನು ಸುತ್ತುವರಿಯುತ್ತವೆ. ಬ್ಯಾಗಿನಿಂದ ವಿವಿಧ ರೀತಿಯ ಹಣ್ಣುಗಳು, ಬಿಸ್ಕತ್ತು, ಮತ್ತು ಬ್ರೆಡ್ ತೆಗೆಯುವ ರುಕ್ಮಿಣಮ್ಮ ಎಲ್ಲ ವಾನರಗಳಿಗೂ ಮತ್ತು ಬೀದಿ ನಾಯಿಗಳಿಗೆ ನೀಡಿ ಮುದ್ದಾದ ಮಾತುಗಳಿಂದ ವಾನರ ಸೈನ್ಯವನ್ನು ಹತ್ತಿರ ಕರೆದು ಉಪಚರಿಸುತ್ತಾರೆ.

ವಾರಕ್ಕೆ ಮೂರು ಬಾರಿ ಆಟೋ ಮಾಡಿಕೊಂಡು ಪೇಟೆಗೆ ಬರುವ ರುಕ್ಮಿಣಮ್ಮಸ್ವಂತ ಖರ್ಚಿನಲ್ಲಿ ಆಯಾ ಸೀಸನ್‌ನಲ್ಲಿ ಸಿಗುವ ಹಲಸು, ದ್ರಾಕ್ಷಿ, ದಾಳಿಂಬೆ, ಮಾವಿನಹಣ್ಣು, ಕಡಲೇಕಾಯಿ, ಸೀಬೆ, ಬಿಸ್ಕತ್ತು, ಬ್ರೆಡ್ ಹೀಗೆ ವಿವಿಧ ರೀತಿಯ ಹಣ್ಣು ಮತ್ತು ಪದಾರ್ಥಗಳನ್ನು ತಂದು ವಾನರ ಸೈನ್ಯಕ್ಕೆ ಹಂಚುತ್ತಿದ್ದು, ಈ ಕೆಲಸದಲ್ಲಿ ಕೋಡಗದಾಲ ಗ್ರಾಮದ ಆಟೋ ಹುಡುಗರು ಬಹಳಷ್ಟು ಸಹಕಾರ ನೀಡುತ್ತಾರೆ ಎಂದು ಸ್ಮರಿಸುತ್ತಾರೆ.

ಗಂಡನ ಪಿಂಚಣಿ, ವೃದ್ಧಾಪ್ಯ ವೇತನ ಬಳಕೆ : ‘ಮೊದಲು ಮನೆ ಹತ್ತಿರ ಬರುತ್ತಿದ್ದ ಕೋತಿಗಳಿಗೆ ಆಹಾರ ನೀಡುತ್ತಿದ್ದೆ. ಅದೇ ಅಭ್ಯಾಸ ಮಾಡಿಕೊಂಡ ಕೋತಿಗಳ ಹಿಂಡು ಮನೆ ಸಮೀಪ ರಸ್ತೆ ದಾಟಿ ಬರುವಾಗ ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದ್ದವು. ಇದರಿಂದ ಮನಸ್ಸಿಗೆ ವೇದನೆಯಾಯಿತು. ಅಂದಿನಿಂದ ನಾನೇ ಪ್ರತೀ ದಿನ ಸಂಜೆ ಶಾಲೆಯ ಗೇಟ್ ಬಳಿ ಬಂದು ಕೂರುತ್ತೇನೆ. ಅವುಗಳೂ ಸಮಯಕ್ಕೆ ಸರಿಯಾಗಿ ಬಂದು ಆಹಾರ ಸ್ವೀಕರಿಸಿ ಹೋಗುತ್ತವೆ. ಅ್ಲದೇ ಬೀದಿ ನಾಯಿಗಳನ್ನು ಯಾರು ಸಾಕುತ್ತಾರೆ, ನನಗೆ ಬರುವ ಪತಿಯ ಪಿಂಚಣಿ ಹಾಗೂ ವೃದ್ಧಾಪ್ಯ ಹಣವನ್ನು ಇದಕ್ಕೆ ಉಪಯೋಗಿಸುತ್ತಿದ್ದು, ಇದರಲ್ಲೇ ಸಂತಸ ಕಂಡಿದ್ದೇನೆ. ನನ್ನ ಮೂವರು ಮಕ್ಕಳೂ ನನ್ನ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಾರೆ’ ಎಂದು ಸ್ಮರಿಸುತ್ತಾರೆ ರುಕ್ಮಿಣಮ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net