4 ಸಾವಿರ ಬೀದಿನಾಯಿಗಳಿಗೆ ಆಹಾರ ವಿತರಣೆ: ಬಿಬಿಎಂಪಿ ಸ್ಪಷ್ಟನೆ

bbmp office
Published on

ಬೆಂಗಳೂರು: ಬೀದಿನಾಯಿಗಳಿಗೆ ಕೋಳಿಯ ಮಾಂಸವನ್ನು ಅಕ್ಕಿ ಹಾಗೂ ತರಕಾರಿ ಜತೆ ಸೇರಿಸಿ ಬೇಯಿಸಿದ ಆಹಾರವನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿರುವ ಬಿಬಿಎಂಪಿ, ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ನಾಯಿಗಳು ಮಾಂಸಾಹಾರಿ ಪ್ರಾಣಿಗಳು. ಅವುಗಳಿಗೆ ಸಮತೋಲಿತ ಆಹಾರ ನೀಡಲು ಇಂತಹದ್ದೊಂದು ಉಪಕ್ರಮ ಕೈಗೊಳ್ಳಲಾಗಿದೆ. ಟೆಂಡರ್‌ನಲ್ಲಿ ಆಹಾರದ ಅಂಗಾಂಶಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆಯೆ ಹೊರತು ಬಿರಿಯಾನಿ ನೀಡುತ್ತಿಲ್ಲ. ಈ ನಿರ್ಧಾರ ಕೈಗೊಳ್ಳುವ ಮುನ್ನ ತಜ್ಞ ಪಶುವೈದ್ಯರ ಸಲಹೆ ಪಡೆಯಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಸ್ಪಷ್ಟೀಕರಣ ನೀಡಿದ್ದಾರೆ.

2.88 ಕೋಟಿ ರೂ. ವೆಚ್ಚಕ್ಕೆ ಟೆಂಡರ್:

ಬಿಬಿಎಂಪಿಯ ಆಹಾರ ನೀಡುವ ಯೋಜನೆಯು ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಬಿಡುಗಡೆಯಾಗಿರುವ ಪರಿಷ್ಕೃತ ಪ್ರಾಣಿಜನನ ನಿಯಂತ್ರಣ ಮಾರ್ಗಸೂಚಿ ಆಧರಿಸಿದೆ. ಹಾಗಾಗಿ ಬೀದಿನಾಯಿಗಳಿಗೆ ಆಹಾರ ವಿತರಿಸಲು 2.88 ಕೋಟಿ ರೂ. ಮೊತ್ತದ ಟೆಂಡರ್ ಆಹ್ವಾನಿಸಲಾಗಿದೆ. ಪಾಲಿಕೆಯ 8 ವಲಯಗಳಲ್ಲಿ ತಲಾ 100 ಸ್ಥಳಗಳಲ್ಲಿ 500 ಶ್ವಾನಗಳಿಗೆ ದಿನಕ್ಕೆ ಒಂದು ಬಾರಿ ವರ್ಷಪೂರ್ತಿ ಆಹಾರ ನೀಡಲಾಗುತ್ತದೆ. ಒಟ್ಟು 4 ಸಾವಿರ ಬೀದಿನಾಯಿಗಳಿಗೆ (ನಗರದಲ್ಲಿ ಇರುವುದು 2.7 ಲಕ್ಷ) ಆಹಾರಕ್ಕಾಗಿ ನಿತ್ಯ ತಲಾ 19 ರೂ. ವೆಚ್ಚವಾಗಲಿದೆ. ಇದರಲ್ಲಿ 8 ರೂ. ದೈನಂದಿನ ಸಾರಿಗೆ, ಆಹಾರ ಪೂರೈಕೆ ಹಾಗೂ ಸ್ಥಳ ಸ್ವಚ್ಛತೆಗೆ ತಗುಲಲಿದ್ದು, ಆಹಾರಕ್ಕಾಗಿ ತಲಾ 11 ರೂ. ವೆಚ್ಚವಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಪಾಲಿಕೆ ಸಮಜಾಯಿಷಿಯ ಪ್ರಮುಖಾಂಶ:

* ಆಹಾರ ವಿತರಣೆಯಿಂದ ಭೈಭೀತ ನಾಯಿಗಳನ್ನು ಹಿಡಿಯಲು ಸಾಧ್ಯವಾಗುತ್ತದೆ.

* ಭವಿಷ್ಯದ ನಾಯಿಕಡಿತ ಪ್ರಕರಣಗಳನ್ನು ತಗ್ಗಿಸುವ ಸಾಧ್ಯತೆ ಇದೆ.

* ಆಹಾರ ನೀಡುವ ಸ್ಥಳ ವಿಭಜಿತ ಆಗುವುದರಿಂದ ಆಹಾರಕ್ಕಾಗಿ ಆಕ್ರಮಣ ವರ್ತನೆಗೆ ಕಡಿವಾಣ.

* ರೇಬೀಸ್ ಲಸಿಕಾ ಯೋಜನೆಗೆ ಸಹಕಾರಿ, ರೋಗ ಹರಡುವಿಕೆಗೆ ತಡೆ.

* ಈಗಾಗಲೇ ಶೇ.70 ಸಂತಾನಹರಣ ಶಸಚಿಕಿತ್ಸೆ ಗುರಿ ಸಾಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net